ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೀಕರ ಕಂಡು ‘ಎಸ್ಕೇಪ್’ ಆಗಿದ್ದ ಕಳ್ಳ ಸೆರೆ

ಮನೆಯಲ್ಲಿ ಕಳ್ಳತನ; ಕಾರ್ತಿಕ್ ಬಂಧನ
Last Updated 17 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿ ಕಳ್ಳತನ ಎಸಗಿ, ಮಾಲೀಕರು ಬರುತ್ತಿದ್ದಂತೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿ ಕಾರ್ತಿಕ್‌ಕುಮಾರ್ ಅಲಿಯಾಸ್ ಎಸ್ಕೇಪ್‌ ಕಾರ್ತಿಕನನ್ನು (30) ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಂಪಿಗೆಹಳ್ಳಿ ನಿವಾಸಿ ಶ್ರೀಕಾಂತ್ ಎಂಬುವರ ಮನೆಯಲ್ಲಿ ಆರೋಪಿ ಕಳ್ಳತನ ಎಸಗಿದ್ದ. ಅವರು ನೀಡಿದ್ದ ದೂರಿನಡಿ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ₹ 8 ಲಕ್ಷ ಮೌಲ್ಯದ 167 ಗ್ರಾಂ ಚಿನ್ನದ ಆಭರಣ ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇದೇ 1ರಂದು ಮಧ್ಯಾಹ್ನ ಶ್ರೀಕಾಂತ್ ಅವರು ಕುಟುಂಬ ಸಮೇತ ಹೊರಗಡೆ ಹೋಗಿದ್ದರು. ಮರುದಿನ ರಾತ್ರಿ 10ರ ಸುಮಾರಿಗೆ ಮನೆಗೆ ವಾಪಸು ಬಂದಿದ್ದರು. ಮನೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಯಾರೂ ಒಳಗೆ ಇರಬಹುದೆಂದು ಕಿಟಕಿಯಲ್ಲಿ ನೋಡಿದ್ದರು. ಅವಾಗಲೇ ಮನೆಯೊಳಗೆ ಅಪರಿಚಿತ ವ್ಯಕ್ತಿ ಕಂಡಿದ್ದ’ ಎಂದು ಹೇಳಿದರು.

‘ಕಳ್ಳ, ಕಳ್ಳ... ಎಂದು ಕೂಗಿದ್ದ ಶ್ರೀಕಾಂತ್‌ ಆತನನ್ನು ಹಿಡಿಯಲು ಮುಂದಾಗಿದ್ದರು. ಆರೋಪಿ ಕಿಟಕಿಯಿಂದ ಹೊರಗೆ ಜಿಗಿದು ಪರಾರಿಯಾಗಿದ್ದ. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ಬಿ.ಎಸ್.ನಂದಕುಮಾರ್, ಪಿಎಸ್ಐ ಶಿವಪ್ಪ ನಾಯ್ಕರ್ ನೇತೃತ್ವದ ತಂಡಕ್ಕೆ ಕಾರ್ತಿಕ್‌ನೇ ಕೃತ್ಯ ಎಸಗಿದ್ದ ಬಗ್ಗೆ ಸುಳಿವು ಸಿಕ್ಕಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಅವರು ತಿಳಿಸಿದರು.

ವಜ್ರದ ಹರಳಿದ್ದ ಆಭರಣ ಕದ್ದಿದ್ದ: ‘ಶ್ರೀಕಾಂತ್‌ ಅವರ ಮನೆಯಲ್ಲಿದ್ದ ₹ 2,000 ನಗದು ಹಾಗೂ 1,000 ಡಾಲರ್‌ ಅನ್ನು ಆರೋಪಿ ಕದ್ದಿದ್ದ. ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಮತ್ತೊಂದು ಮನೆಯಲ್ಲಿ ವಜ್ರದ ಹರಳುಗಳಿದ್ದ ಚಿನ್ನದ ಆಭರಣ ಕಳವು ಮಾಡಿದ್ದ’ ಎಂದು ಅಧಿಕಾರಿ ಹೇಳಿದರು.

‘ಕಳ್ಳತನ ಮಾಡುವುದನ್ನೇ ಆರೋಪಿ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಹಲವು ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಬಂದಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT