ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಸಿರಿ ಎಥೆನಾಲ್ ಕೈಗಾರಿಕೆ: ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ; ಈಶ್ವರ ಖಂಡ್ರೆ

Published : 28 ಆಗಸ್ಟ್ 2024, 8:41 IST
Last Updated : 28 ಆಗಸ್ಟ್ 2024, 8:41 IST
ಫಾಲೋ ಮಾಡಿ
Comments

ಬೆಂಗಳೂರು: ‘ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸೇರಿದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಾರ್ಯಾಚರಣೆ ಸಮ್ಮತಿ ಪತ್ರ ನೀಡುವ ಸಂಬಂಧ ಹೈಕೋರ್ಟ್ ತೀರ್ಪನ್ನು ಪರಿಶೀಲಿಸಿ, ಕಾಲಮಿತಿಯಲ್ಲಿ ಕ್ರಮ ವಹಿಸಲಾಗುವುದು’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸಿದ್ದಸಿರಿ ಕಾರ್ಖಾನೆ ಈ ಹಿಂದೆ ಅನುಮತಿ ಇಲ್ಲದೆ ಬಾಯ್ಲರ್ ಸ್ಥಾಪನೆ ಮಾಡಿದ್ದು, ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಹಂತದಲ್ಲಿದ್ದರೂ ನಿಯಮ ಉಲ್ಲಂಘಿಸಿ ಲಕ್ಷಾಂತರ ಟನ್ ಕಬ್ಬು ನುರಿಸಿತ್ತು ಹೀಗಾಗಿ ಮಂಡಳಿ ಕ್ರಮ ತೆಗೆದುಕೊಂಡಿತ್ತು’ ಎಂದರು.

‘ಈ ಎಥನಾಲ್ ಕಾರ್ಖಾನೆ ಪೂರ್ವಾನುಮತಿ ಇಲ್ಲದೆ ತನ್ನ ಸಾಮರ್ಥ್ಯ ವಿಸ್ತರಿಸಿ ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸಿರುವ ಕಾಋಣ ಕೇಂದ್ರ ಪರಿಸರ ಇಲಾಖೆಯೇ ₹ 1.58 ಕೋಟಿ ದಂಡ ವಿಧಿಸಿತ್ತು, ದಂಡ ಕಟ್ಟಿದ ಬಳಿಕವೂ ಘಟಕ ಸ್ಥಾಪನೆಗೆ ಅನುಮೋದನೆ ಪಡೆಯದೆ ಮತ್ತೆ ಕಾರ್ಯಾಚರಣೆ ಮಾಡಿದ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡಿರುವುದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದ ಖಂಡ್ರೆ, ‘ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಾಗಲಿ, ದ್ವೇಷವಾಗಲಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪೂರ್ವಾನುಮತಿ ಇಲ್ಲದೆ ಕಾರ್ಖಾನೆ ಮತ್ತೆ ಲಕ್ಷಾಂತರ ಟನ್ ಕಬ್ಬು ನುರಿಸಿ ಎಥನಾಲ್ ಉತ್ಪಾದಿಸಿರುವುದೇ ಅಲ್ಲದೆ, ನದಿಗೆ ತ್ಯಾಜ್ಯ ಹರಿಯಬಿಟ್ಟಿರುವ ಆರೋಪವೂ ಇದೆ. ಇದು ಜಲ ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ’ ಎಂದರು.

‘ಪ್ರಸ್ತುತ ಹೈಕೋರ್ಟ್ ಆದೇಶ ನೀಡಿದೆ. ಯತ್ನಾಳ್ ಅವರು ಮಂಗಳವಾರವಷ್ಟೆ ಕೋರ್ಟ್ ಆದೇಶದ ದೃಢೀಕೃತ ಪ್ರತಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.  ಕಾನೂನು ವಿಭಾಗದೊಂದಿಗೆ ಚರ್ಚಿಸಿ ಮಂಡಳಿ ಮುಂದಿನ ಕ್ರಮ ವಹಿಸುತ್ತದೆ. ನ್ಯಾಯಾಲಯ 4 ವಾರ ಕಾಲಾವಕಾಶ ನೀಡಿರುವಾಗ ಯತ್ನಾಳ್ ಅವರು ಒಂದೇ ದಿನದಲ್ಲಿ ಅನುಮತಿ ಪತ್ರ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಮಂಡಳಿ ಅಧಿಕಾರಿಗಳಿಗೆ ಕೆಲಸ ಮಾಡಲು ಕಾಲಾವಕಾಶ ನೀಡಬೇಕು’ ಎಂದು ಹೇಳಿದರು.

‘ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಯತ್ನಾಳ್ ಅವರು ಆರೋಪಿಸಿದ್ದಾರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಆರೋಪ ಮಾಡುವ ಬದಲು ದಾಖಲೆ ನೀಡಿದರೆ, ತನಿಖೆಗೆ ಆದೇಶ ನೀಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT