ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ ಅವಧಿ ವಿಸ್ತರಣೆ: ವರದಿ ಸಲ್ಲಿಕೆಗೆ ಹೈಕೋರ್ಟ್‌ ಆದೇಶ

Published 10 ಜನವರಿ 2024, 20:10 IST
Last Updated 10 ಜನವರಿ 2024, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲ್ಲು ಗಣಿಗಾರಿಕೆ ಮತ್ತು ಎಂ-ಸ್ಯಾಂಡ್ ಸೇರಿದಂತೆ ಉಪ ಖನಿಜಗಳ ಗಣಿ ಗುತ್ತಿಗೆ ಅವಧಿ ವಿಸ್ತರಿಸಲು ಅವಕಾಶ ಕಲ್ಪಿಸಿರುವ ತಿದ್ದುಪಡಿ ನಿಯಮವನ್ನು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಿ‘ ಎಂದು ಹೈಕೋರ್ಟ್‌, ರಾಜ್ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ ಆಮ್‌ ಆದ್ಮಿ ಪಕ್ಷದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಶಿವಕುಮಾರ್ ಸಲ್ಲಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ವಿಜೇತಾ ಆರ್ ನಾಯಕ್, ‘ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಅನುಸಾರ ನಿರ್ದಿಷ್ಟ ಖನಿಜಗಳಿಗೆ ಚಾಲ್ತಿ ಗಣಿ ಗುತ್ತಿಗೆ ಅವಧಿ 20 ವರ್ಷ ಇದ್ದುದನ್ನು 30 ವರ್ಷಕ್ಕೆ ಹಾಗೂ ಅನಿರ್ದಿಷ್ಟವಲ್ಲದ ಖನಿಜಗಳ ಅವಧಿ 30 ವರ್ಷ ಇದ್ದುದನ್ನು ಏಕಾಏಕಿ 50 ವರ್ಷಕ್ಕೆ ವಿಸ್ತರಿಸಲಾಗಿದೆ. ಇದು ಕಾನೂನು ಬಾಹಿರ‘ ಎಂದು ಆಕ್ಷೇಪಿಸಿದರು.

‘ಹೊಸ ಹರಾಜಿಗೆ ಅವಕಾಶ ಕೊಡದೆ, ಚಾಲ್ತಿ ಗಣಿ ಗುತ್ತಿಗೆಗಳ ಅವಧಿಯನ್ನು ವಿಸ್ತರಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆ. ಅಂತೆಯೇ, ಗಣಿಗಾರಿಕೆಯಲ್ಲಿ ಹೊಸಬರಿಗೆ ಅವಕಾಶ ಸಿಗದಂತಾಗಿದೆ. ಚಾಲ್ತಿ ಗಣಿ ಗುತ್ತಿಗೆಗಳ ಅವಧಿ ವಿಸ್ತರಿಸುವುದರಿಂದ ಹಳೆಯ ಗಣಿ ಗುತ್ತಿಗೆದಾರರ ಪ್ರಾಬಲ್ಯ ಹೆಚ್ಚಾಗಿ ಏಕಸ್ವಾಮ್ಯತೆಗೆ ಅವಕಾಶ ಮಾಡಿಕೊಡಲಿದೆ‘ ಎಂದರು.

‘ರಾಜ್ಯ ಸರ್ಕಾರ 2023ರ ಮಾರ್ಚ್ 17ರಂದು ಜಾರಿಗೆ ತಂದಿರುವ ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ-2023ರ ನಿಯಮ 8(ಎ)(1) ಅನ್ನು ರದ್ದುಪಡಿಸಬೇಕು. ಗಣಿ ಗುತ್ತಿಗೆ ನೀಡುವ ಸಂಬಂಧ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಅರ್ಜಿ ವಿಲೇವಾರಿ ಆಗುವತನಕ ತಿದ್ದುಪಡಿ ನಿಯಮಗಳ ಜಾರಿಗೆ ತಡೆ ನೀಡಬೇಕು‘ ಎಂದು ಕೋರಿದರು.

ಸರ್ಕಾರದ ಪರ ಹಾಜರಿದ್ದ ವಕೀಲ ಎಸ್.ಎಸ್. ಮಹೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರಾದರೂ ನ್ಯಾಯಪೀಠ ಅದನ್ನು ಒಪ್ಪದೆ, ‘ಇದೊಂದು ಗಂಭೀರ ವಿಷಯ. ಅರ್ಜಿಯಲ್ಲಿ ಆಕ್ಷೇಪಿಸಿರುವ ವಿಷಯಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಿ‘ ಎಂದು ತಾಕೀತು ಮಾಡಿತು.

ಇದೇ ವೇಳೆ ಅರ್ಜಿಯಲ್ಲಿ ನಮ್ಮನ್ನೂ ಪ್ರತಿವಾದಿಯಾಗಿ ಸೇರ್ಪಡೆ ಮಾಡಬೇಕು ಎಂದು ‘ಫೆಡರೇಷನ್ ಆಫ್ ಕರ್ನಾಟಕ ಗ್ರಾನೈಟ್ ಇಂಡಸ್ಟ್ರಿ‘ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಪೀಠ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT