ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾಗುತ್ತಿರುವ ನಾಗಪಂಚಮಿ ಸಡಗರ

ಹಬ್ಬದಂದು ನಡೆಯುತ್ತಿದ್ದ ರೋಮಾಂಚಕ ಸ್ಪರ್ಧೆಗಳು ಮಾಯ
Published 20 ಆಗಸ್ಟ್ 2023, 5:53 IST
Last Updated 20 ಆಗಸ್ಟ್ 2023, 5:53 IST
ಅಕ್ಷರ ಗಾತ್ರ

ಮುಂಡರಗಿ: ನಾಡಿಗೆಲ್ಲ ಸಂಭ್ರಮ ತರುವ ನಾಗಪಂಚಮಿಯು ಮುಂಬರುವ ಗಣೇಶ ಚತುರ್ಥಿ, ವಿಜಯದಶಮಿ, ದೀಪಾವಳಿ ಮೊದಲಾದ ಹಬ್ಬಗಳಿಗೆ ನಾಂದಿ ಹಾಡುತ್ತದೆ. ನಾಗ ಪಂಚಮಿಯಿಂದ ಆರಂಭವಾಗುವ ಹಬ್ಬಗಳ ಸರಣಿಯು ಯುಗಾದಿ ಹಬ್ಬದವರೆಗೂ ಮುಂದುವರಿಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ನಾಗ ಪಂಚಮಿ ಹಬ್ಬದ ಗತ್ತು, ಗಮ್ಮತ್ತು ಹಾಗೂ ಅದರ ಮಹತ್ವ ಕಡಿಮೆಯಾಗುತ್ತಿದೆ. ಪಂಚಮಿ ಹಬ್ಬಕ್ಕಾಗಿ ತಿಂಗಳುಗಟ್ಟಲೆ ಕಾತರಿಸುತ್ತಿದ್ದ ಮಕ್ಕಳು, ಮಹಿಳೆಯರು ಈಗ ಹಬ್ಬ ಆಚರಿಸಲು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಜನ ಜೀವನ ತೀರಾ ಯಾಂತ್ರಿಕೃತವಾಗಿದ್ದು, ಜನರು ಹಬ್ಬಗಳನ್ನು ಆಚರಿಸಲು ಮೊದಲಿನ ಉತ್ಸಾಹ ತೋರುತ್ತಿಲ್ಲ.

ಪಂಚಮಿ ಇನ್ನು ಒಂದು ವಾರ ಇರುವಾಗಲೇ ಮಕ್ಕಳು ಹಾಗೂ ಯುವಕರು ಹತ್ತಿರದ ಗಿಡಗಳಿಗೆ ದೊಡ್ಡ ಜೋಕಾಲಿ ಕಟ್ಟಿ ಜೀಕಿ ಸಂಭ್ರಮಿಸುತ್ತಿದ್ದರು. ಪಟ್ಟಣದ ಬಹುತೇಕ ಭಾಗಗಳ ಗಿಡಗಳಲ್ಲಿ ದೊಡ್ಡ ಹಗ್ಗದಿಂದ ನೂರಾರು ಜೋಕಾಲಿಗಳನ್ನು ಕಟ್ಟುತ್ತಿದ್ದರು. ಈಗ ಜೋಕಾಲಿ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದ್ದು, ಪಟ್ಟಣದಲ್ಲಿ ಬೆರಳೆಣಿಕೆಯ ಜೋಕಾಲಿಗಳು ಮಾತ್ರ ಕಂಡುಬರುತ್ತಲಿವೆ.

ಜೋಕಾಲಿಯ ವಿರುದ್ಧ ದಿಕ್ಕಿನ ಗಿಡದ ಟೊಂಗೆಯಲ್ಲಿ ಒಣ ಕೊಬ್ಬರಿ ಬಟ್ಟಲು, ಉತತ್ತಿ, ಉಂಡೆ ಮೊದಲಾದವುಗಳ ಮಾಲೆಯನ್ನು ಮಾಡಿ ತೂಗು ಬಿಡಲಾಗುತ್ತಿತ್ತು. ಯುವಕ, ಯುವತಿಯರು ಜೋಕಾಲಿ ಜೀಕುತ್ತಾ ಮರದ ಇನ್ನೊಂದು ತುದಿಗೆ ಕಟ್ಟಿರುವ ಸರವನ್ನು ಕಾಲಿನಿಂದ ಕಿತ್ತುಕೊಳ್ಳಬೇಕಿತ್ತು. ಇಂತಹ ರೋಮಾಂಚಕ ಸ್ಪರ್ಧೆಗಳು ಈಗ ಮರೆಯಾಗುತ್ತವೆ.

ಪಂಚಮಿ ಹಬ್ಬದಲ್ಲಿ ಯುವಕರ ತಂಡಗಳು ತಮ್ಮ ಓಣಿಯಲ್ಲಿ ಗುಂಪು ಗುಂಪಾಗಿ ಸೇರಿ ಹೊಟ್ಟೆಪ್ಪ (ಕಲ್ಲಿನ ಮೇಲೆ ಕಲ್ಲಿಟ್ಟು ಆಡುವುದು), ತೂರು ಬಿಲ್ಲೆಯಾಟ, ದೂರದವರೆಗೂ ನಿಂಬೆ ಹಣ್ಣು ಎಸೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಗದಿತ ಸ್ಥಳ ತಲುಪುವುದು ಮೊದಲಾದ ಗ್ರಾಮೀಣ ಹಾಗೂ ಜಾನಪದದ ಆಟಗಳಲ್ಲಿ ತೊಡಗುತ್ತಿದ್ದರು. ಈಗ ಎಲ್ಲರ ಕೈಯಲ್ಲಿಯೂ ಮೊಬೈಲ್ ಬಂದು ಹಬ್ಬದಾಟಗಳು ಹಿನ್ನೆಲೆಗೆ ಸರಿಯುವಂತಾಗಿದೆ.

ಬಹುತೇಕ ಭಾಗಗಳಲ್ಲಿ ಒಂದುವಾರ ಮೊದಲೆ ಪಂಚಮಿ ಹಬ್ಬದ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಈಗ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅಡುಗೆ ಮನೆಗಳು ಬಣಗೂಡುತ್ತಿದ್ದು, ಹಬ್ಬಕ್ಕಾಗಿ ಮನೆಯಲ್ಲಿ ಬಗೆ ಬಗೆಯ ಉಂಡಿ, ತಿಂಡಿ, ತಿನಿಸು ತಯಾರಿಸುವುದು ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಎಲ್ಲವು ಸುಲಭವಾಗಿ ದೊರೆಯುತ್ತಿದ್ದು, ಜನರು ಸಿದ್ಧ ಆಹಾರ ಪದಾರ್ಥಗಳಿಗೆ ಮೊರೆಹೂಗುತ್ತಿದ್ದಾರೆ.

ಮೊಬೈಲ್‌ ಬಂದಮೇಲೆ ಬಹುತೇಕ ಜನರು ಹಬ್ಬದಲ್ಲಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಬ್ಬಗಳು ನಮ್ಮ ಪರಂಪರೆಯ ಪ್ರತಿಬಿಂಬಗಳಾಗಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು.
ಮಂಜುನಾಥ ಇಟಗಿ, ಸಮಾಜ ಸೇವಕ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT