ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹರೀಶ್‌ ಸಾಂತ್ವನ’ಕ್ಕೆ ನಕಲಿ ಫಲಾನುಭವಿಗಳ ಕಾಟ

Last Updated 3 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಇಲಾಖೆಯ ‘ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆ’ಗೆ ನಕಲಿ ಫಲಾನುಭವಿಗಳ ಕಾಟ ಎದುರಾಗಿದೆ. ಹಣ ಪಾವತಿಗಾಗಿ ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌’ಗೆ ಸಲ್ಲಿಕೆಯಾಗಿದ್ದ 3,972 ಅರ್ಜಿಗಳನ್ನು ಈ ಕಾರಣಕ್ಕೆ ತಿರಸ್ಕರಿಸಲಾಗಿದೆ.

ಬೆಂಗಳೂರು ಸಮೀಪ 2016ರ ಫೆಬ್ರುವರಿಯಲ್ಲಿ ನಡೆದ ಅಪಘಾತದಲ್ಲಿ ಹರೀಶ್ ನಂಜಪ್ಪ ಅವರು ಸಾವನ್ನಪ್ಪಿದ್ದರು. ಅಪಘಾತದಲ್ಲಿ ಅವರ ದೇಹ ಎರಡು ತುಂಡಾಗಿತ್ತು. ಪ್ರಾಣ ಹೋಗುವ ಹಂತದಲ್ಲಿಯೂ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಲು ಸೂಚಿಸಿದ್ದರು. ಜೀವ ಹೋಗುವ ಸನ್ನಿವೇಶದಲ್ಲೂ ಪರೋಪಕಾರ ಗುಣ ತೋರಿದ ಕಾರಣಕ್ಕೆ ಈ ಯೋಜನೆಗೆ ಹರೀಶ್ ಹೆಸರು ಇಡಲಾಗಿದೆ. ಅಪಘಾತಗಳಲ್ಲಿ ಗಾಯಗೊಂಡವರಿಗೆ 48 ಗಂಟೆಗಳವರೆಗೆ ಚಿಕಿತ್ಸೆ ನೀಡಲು ಆರಂಭಿಸಿರುವ ಯೋಜನೆ ಇದು. ಇದರಡಿ ಗಾಯಾಳುಗಳಿಗೆ ಗರಿಷ್ಠ ₹ 25 ಸಾವಿರ ನೆರವು ಸಿಗಲಿದೆ.

‘2016ರ ಮಾರ್ಚ್‌ನಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಲವು ಆಸ್ಪತ್ರೆಗಳು ದುರ್ಬಳಕೆ ಮಾಡಿಕೊಂಡಿವೆ. ಆರೋಗ್ಯ ಕರ್ನಾಟಕ ಯೋಜನೆಯಡಿ 154 ತುರ್ತು ಸೇರ್ಪಡೆಯಾಗುತ್ತಿವೆ. ಇದರಿಂದಾಗಿ ಯೋಜನೆಯ ದುರ್ಬಳಕೆ ಕಡಿಮೆಯಾಗಲಿದೆ’ ಎಂದು ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎನ್‌.ಟಿ.ಅಬ್ರೂ ವಿಶ್ವಾಸ ವ್ಯಕ್ತಪಡಿಸಿದರು.

‘ಅಪಘಾತದ ಗಾಯಾಳುಗಳಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಆರಂಭಿಸಿದೆ. ಗಾಯಾಳುಗಳಿಗೆ ದೊಡ್ಡ ಗಾಯವಾಗಿದೆ ಎಂದು ಬಿಂಬಿಸಿ ಆಸ್ಪತ್ರೆಗಳು ಹಣ ಪಾವತಿಗೆ ಅರ್ಜಿಗಳನ್ನು ಸಲ್ಲಿಸುತ್ತಿವೆ. ಹಲವರಿಗೆ ಗೀರು ಗಾಯಗಳಾಗಿರುವುದು ಪರಿಶೀಲನೆಯ ವೇಳೆ ಗೊತ್ತಾಗಿದೆ. ಇದಕ್ಕೆ ದೊಡ್ಡ ಮೊತ್ತಗಳನ್ನು ಕ್ಲೇಮ್‌ ಮಾಡಿದ್ದಾರೆ’ ಎಂದು ಹೇಳಿದರು.

ಅನೇಕ ‍ಪ್ರಕರಣಗಳಲ್ಲಿ ಸಮರ್ಪಕ ದಾಖಲೆಗಳಿಲ್ಲ. ಗಾಯಾಳು ಪ್ರಕರಣಕ್ಕೆ ಮೊದಲು ಹಾಗೂ ಬಳಿಕ ತೆಗೆದುಕೊಂಡ ಛಾಯಾಚಿತ್ರಗಳಿಗೆ ಹೊಂದಾಣಿಕೆ ಆಗುತ್ತಿಲ್ಲ ಎಂದು ಅಬ್ರೂ ಹೇಳಿದರು. ‘ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳಿವೆ. ಛಾಯಾಚಿತ್ರ ತೆಗೆದು ದಾಖಲೆಯ ಜತೆಗೆ ಸಲ್ಲಿಸಬಹುದು. ಆದರೆ, ಅನೇಕ ಆಸ್ಪತ್ರೆಗಳು ಅಗತ್ಯ ದಾಖಲೆಗಳನ್ನು ಒದಗಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT