ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನಸೌಧದ ಎದುರು ರೈತರ ಧರಣಿ; ಸಚಿವರಿಂದ ಕೃಷಿ ಕಾಯ್ದೆ ಹಿಂಪಡೆಯುವ ಭರವಸೆ

Published 4 ಡಿಸೆಂಬರ್ 2023, 12:54 IST
Last Updated 4 ಡಿಸೆಂಬರ್ 2023, 12:54 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಹಿಂದಿನ ರಾಜ್ಯ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಯನ್ನು ಹಿಂಪಡೆಯಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹಾದೇವಪ್ಪ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸಮೀಪದ ಸುವರ್ಣ ವಿಧಾನಸೌಧದ ಎದುರು ಸೋಮವಾರ ನಡೆದ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅವರು, ‘ರೈತರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದರು.

‘ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕ ಬಳಿಕ ಮಹದಾಯಿ ಮತ್ತು ಮೇಕೆದಾಟು ಯೋಜನೆ ಕಾಮಗಾರಿ ಆರಂಭಿಸಲು ಯಾವುದೇ ತಕರಾರು ಇರುವುದಿಲ್ಲ’ ಎಂದರು.

‘ಹಾಲಿನ ದರ ಹೆಚ್ಚಳ, ಕೃಷಿ ಕಾಯ್ದೆ ವಾಪಸ್, ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಅನುಷ್ಠಾನ, ಬರಗಾಲದ ತುರ್ತು ಕಾರ್ಯಕ್ರಮಗಳು ಜಾರಿ, ಸೆಪ್ಟೆಂಬರ್ 22ರ ವಿದ್ಯುತ್ ಕಾಯ್ದೆ ವಾಪಸ್‌, ಕಬ್ಬಿಗೆ ಎಫ್‌ಆರ್‌ಪಿ ಜೊತೆ ಎಸ್ಎಪಿ ನೀಡುವುದು ಮುಂತಾದ ಬೇಡಿಕೆಗಳನ್ನು ರೈತರು ಸಲ್ಲಿಸಿದ್ದಾರೆ. ಇವುಗಳ ಬಗ್ಗೆ ಬೆಂಗಳೂರಿಗೆ ಹೋಗಿ ವಿಧಾನಸೌಧದಲ್ಲಿ ಚರ್ಚೆ ಮಾಡುತ್ತೇವೆ’ ಎಂದರು.

ಇದಕ್ಕೂ ಮುನ್ನ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಅವಕಾಶ ನೀಡದ ಪೊಲೀಸರು ರೈತರನ್ನು ಸರ್ಕಾರಿ ಬಸ್ಸಿನಲ್ಲಿ ಹತ್ತಿಸಿ ಖೊಂಡಸಕೊಪ್ಪದಲ್ಲಿ ಹಾಕಿದ ಶಾಮಿಯಾನದ ಬಳಿ ಬಿಟ್ಟರು.

‘ರೈತರಿಗೆ ಮಾರಕವಾದ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ರೈತರ ಮನವಿಗೆ ಬೆಲೆ ಕೊಡದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಖಚಿತ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಸಿದರು.

ಅಲ್ಲಿ ಸಂಜೆಯವರೆಗೂ ದರಣಿ ನಡೆಸಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT