ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಸಿನಿಮೋತ್ಸವದಲ್ಲಿ ತುಳುನಾಡಿನ ಪೆಂಪು!

ಅಲೋಶಿಯಸ್ ಕಾಲೇಜಿನಲ್ಲಿ 5 ಭಾಷೆಗಳ ಸಿನಿಮಾ ಪ್ರದರ್ಶನ, ಸಂವಾದ, ರಸಗ್ರಹಣ ಶಿಬಿರ
Last Updated 18 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಯಾವುದೇ ದೇಶದಲ್ಲಿ ತಯಾರಾದ ಸಿನಿಮಾ ಆಗಲೀ ಅದರಲ್ಲಿ ಆ ಭಾಷೆಯ ಸಂಸ್ಕೃತಿ, ಕಲೆಯ ಪರಿಮಳ ಅಡಗಿರುತ್ತದೆ. ಹಾಗಾಗಿ, ಸಿನಿಮಾಗಳಲ್ಲಿನ ಪ್ರಾದೇಶಿಕತೆಯ ಮಹತ್ವ ಅರಿತುಕೊಳ್ಳಲು ಹಾಗೂ ಭಾಷೆ ಮತ್ತು ಸಂಸ್ಕೃತಿಯ ದೇಸಿ ಘಮಲನ್ನು ಆಸ್ವಾದಿಸಲು ಸಿನಿಪ್ರೇಮಿಗಳಿಗೆ ಅವಕಾಶ ಮಾಡಿಕೊಡುವುದು ‘ಸಿನಿಮೋತ್ಸವ'ಗಳು.

ಸಂಸ್ಕೃತಿ ಮತ್ತು ಕಲೆಯ ಬೀಡು ಕರುನಾಡು. ಪ್ರಾದೇಶಿಕ ಭಾಷೆಗಳ ಸಂಗಮ ಕ್ಷೇತ್ರ ಕನ್ನಡ ನಾಡು. ಕರಾವಳಿ ಭಾಗದಲ್ಲಿ ಅನುರಣಿಸುವ ತುಳು, ಬ್ಯಾರಿ, ಕೊಂಕಣಿ, ಕೊಡವ ಮತ್ತು ಬಂಜಾರ ಭಾಷೆಗಳನ್ನು ಒಂದೇ ಸೂರಿನಡಿ ತಂದು ಆಯಾ ಭಾಷೆಗಳ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಿನಿಪ್ರಿಯರಿಗೆ ಉಣಬಡಿಸುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹಯೋಗದಲ್ಲಿ ಇದೇ 21ರಿಂದ 23ರವರೆಗೆ ಕಾಲೇಜಿನಲ್ಲಿ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವವನ್ನು ಆಯೋಜಿಸಿದೆ.

ತುಳು, ಬ್ಯಾರಿ, ಕೊಂಕಣಿ, ಕೊಡವ, ಬಂಜಾರ ಈ ಐದೂ ಭಾಷೆಗಳಲ್ಲಿ ಈವರೆಗೆ ಸಾಕಷ್ಟು ಚಿತ್ರಗಳು ತಯಾರಾಗಿವೆ. ಸಂಖ್ಯೆಯ ದೃಷ್ಟಿಯಿಂದ ಕೆಲವು ಭಾಷೆಗಳಲ್ಲಿ ತಯಾರಾದ ಸಿನಿಮಾಗಳು ಕಡಿಮೆ. ಆದರೆ, ತುಳುವಿನಲ್ಲಿ ಸಾಕಷ್ಟು ಚಿತ್ರಗಳು ಮೂಡಿ ಬಂದಿವೆ. ಹೀಗೆ ಒಂದು ಭಾಗದ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ ಸಿನಿಮಾಗಳನ್ನೆಲ್ಲಾ ಒಂದೇ ‘ಸ್ಕ್ರೀನಿ’ನಡಿಗೆ ತಂದು ಪ್ರದರ್ಶಿಸಬೇಕು ಎಂಬುದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಉದ್ದೇಶ. ಅದರಂತೆ, ಮಂಗಳೂರಿನಲ್ಲಿ ನಡೆಯುವ ಪ್ರಾದೇಶಿಕ ಭಾಷಾ ಸಿನಿಮೋತ್ಸವದ ಜವಾಬ್ದಾರಿಯನ್ನು ನಾ. ದಾಮೋದರ ಶೆಟ್ಟಿ ಅವರು ಹೊತ್ತುಕೊಂಡಿದ್ದಾರೆ.

ಪ್ರಾದೇಶಿಕ ಚಲನಚಿತ್ರೋತ್ಸವ ಮಂಗಳೂರಿನಲ್ಲಿ ನಡೆಯುತ್ತಿರುವುದರಿಂದ ತುಳು ಚಿತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೋಸ್ಟಲ್‌ವುಡ್‌ಗೆ ಶತಕ ಪೂರೈಸಿದ ಸಂಭ್ರಮದ ಪುಳಕದಲ್ಲಿ ಮಿಂದೇಳಲಿದೆ. ಕಾಮಿಡಿಯನ್ನೇ ಪ್ರಧಾನವಾಗಿಟ್ಟುಕೊಂಡು ತೆರೆಕಂಡ ಸಾಕಷ್ಟು ತುಳು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಿವೆ. ಹಾಗೆಯೇ, ಗಂಭೀರ ವಸ್ತು ವಿಷಯವನ್ನಿಟ್ಟುಕೊಂಡು ರೂಪಿಸಿದ ಕಲಾತ್ಮಕ ಸಿನಿಮಾಗಳು ಕೂಡ ಸೂಕ್ಷ್ಮ ಮನಸ್ಸಿನ ಸಿನಿಮೋಹಿಗಳ ಮನಗೆದ್ದಿವೆ. ಜತೆಗೆ ರಾಷ್ಟ್ರಪ್ರಶಸ್ತಿಗಳನ್ನೂ ಮುಡಿಗೇರಿ ಸಿಕೊಂಡಿವೆ.

ಈ ನಿಟ್ಟಿನಲ್ಲಿ ಪ್ರಾದೇಶಿಕ ಚಲನಚಿತ್ರೋತ್ಸವದಲ್ಲಿ ಜನಪ್ರಿಯ ತುಳು ಸಿನಿಮಾಗಳ ಜತೆಗೆ ಕಲಾತ್ಮಕ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತಿದೆ. ಇದು ಪ್ರೇಕ್ಷಕರಿಗೆ ಮನರಂಜನೆ ಮತ್ತು ಕಲಾತ್ಮಕ ಈ ಎರಡರ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಡಲಿದೆ. ಪ್ರೇಕ್ಷಕರು ಚಿತ್ರ ನೋಡುವುದರ ಜತೆಗೆ ಸಿನಿಮಾದ ನಿರ್ದೇಶಕರು ಮತ್ತು ತಯಾರಕರೊಂದಿಗೆ ಸಂವಾದ ನಡೆಸುವುದಕ್ಕೂ ಇಲ್ಲಿ ಅವಕಾಶವಿದೆ. ಹಾಗೆಯೇ, ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವ ಕಾಲೇಜು ವಿದ್ಯಾರ್ಥಿಗಳು ಸಿನಿಮಾ ನೋಡುವುದು ಹೇಗೆ? ಏಕೆ ನೋಡಬೇಕು? ಎಂಬ ಕಲೆಯನ್ನೂ ಅರಿತುಕೊಳ್ಳಲು ನೆರವಾಗುವಂತಹ ರಸಗ್ರಹಣ ಶಿಬಿರಗಳೂ ನಡೆಯಲಿವೆ.

ಅಂದ ಹಾಗೆ, ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿರುವುದು ಆ ಸಿನಿಮಾಗಳು ಪಡೆದಿರುವ ಪ್ರಶಸ್ತಿಗಳು ಹಾಗೂ ಪ್ರಸ್ತುತತೆಯ ಆಧಾರದ ಮೇಲೆ. ಈವರೆಗೆ ತುಳು ಭಾಷೆಯ ಸಾಕಷ್ಟು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಲಭಿಸಿವೆ. ಅವೆಲ್ಲವನ್ನೂ ಪ್ರ್ರತಿನಿಧಿಸುವಂತೆ ಇತ್ತೀಚೆಗೆ ತೆರೆಕಂಡ ‘ಪಡ್ಡಾಯಿ’ ಸಿನಿಮಾವನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸುವುದಕ್ಕೆ ಅಕಾಡೆಮಿ ಯೋಚಿಸಿದೆ. ಇವುಗಳ ಜತೆಗೆ ಪ್ರಾದೇಶಿಕ ಎಂಬ ಶಬ್ದಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟು ಕನ್ನಡದ ಒಂದು ಸಿನಿಮಾವನ್ನೂ ಪ್ರದರ್ಶಿಸುವ ಯೋಚನೆಯನ್ನೂ ಅದು ಹೊಂದಿದೆ. ಗಡಿನಾಡ ಕನ್ನಡಿಗರ ಸಮಸ್ಯೆ, ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಬಿಂಬಿಸುವ ‘ಸ.ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರ ಕೂಡ ಪ್ರದರ್ಶನಗೊಳ್ಳಲಿದೆ.

ಈವರೆಗೆ ಮಂಗಳೂರಿನಲ್ಲಿ ಸಣ್ಣ ಪುಟ್ಟ ಚಲನಚಿತ್ರೋತ್ಸವಗಳು ನಡೆದಿವೆ. ಆದರೆ, ಸರ್ಕಾರದ ವತಿಯಿಂದ ಮಂಗಳೂರಿನಲ್ಲಿ ಪ್ರಾದೇಶಿಕ ಭಾಷಾ ಚಲನಚಿತ್ರೋತ್ಸವ ನಡೆಯುತ್ತಿರುವುದು ಇದೇ ಮೊದಲು. ಆಯಾ ಪ್ರದೇಶದ ಸಂಸ್ಕೃತಿಗೆ ಸಂಬಂಧಪಡುವ ಮತ್ತು ಆಯಾ ಪ್ರದೇಶದ ಭಾಷೆಯ ಬೆಳವಣಿಗೆಗೆ ಸಂಬಂಧಪಡುವ ಗುರಿಯನ್ನು ಇಟ್ಟುಕೊಂಡು ಈ ಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎನ್ನುವ ಆಯೋಜಕರ ಉದ್ದೇಶದಂತೆ ಪ್ರಾದೇಶಿಕ ಸಂಸ್ಕೃತಿ, ಕಲೆ ಮತ್ತು ಭಾಷೆಯನ್ನು ಎತ್ತಿಹಿಡಿಯುವಂತಹ ಸಿನಿಮಾಗಳೇ ಬೆಳ್ಳಿಪರದೆ ಮೇಲೆ ಪ್ರದರ್ಶನಗೊಳ್ಳಲಿವೆ. ಈಗ ನೋಡಿ ಎದೆಗಳಿಸಿಕೊಳ್ಳುವ ಸುಖ ಸಿನಿಮೋಹಿಗಳದ್ದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT