ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಭೂಮಿ ರಕ್ಷಣೆಗೆ ‘ಅರಣ್ಯ ಕಾಯ್ದೆ’ ಮಾದರಿ: ಸಂಪುಟ ಉಪ ಸಮಿತಿ ನಿರ್ಧಾರ

Published 29 ಅಕ್ಟೋಬರ್ 2023, 20:05 IST
Last Updated 29 ಅಕ್ಟೋಬರ್ 2023, 20:05 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಭೂಮಿಯನ್ನು ಅವ್ಯಾಹತವಾಗಿ ಕಬಳಿಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಅರಣ್ಯ ಭೂಮಿ ಒತ್ತುವರಿ ಮಾಡಿದವರಿಗೆ ವಿಧಿಸುವ ಶಿಕ್ಷೆಯನ್ನು ಈ ಕಬಳಿಕೆದಾರರಿಗೂ ಅನ್ವಯಿಸಲು ಮುಂದಾಗಿದೆ. 

ಕಂದಾಯ ಭೂಮಿ ರಕ್ಷಣೆ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಒಳಗೊಂಡ ಸಚಿವ ಸಂಪುಟ ಉಪ ಸಮಿತಿಯು ನಿರ್ಧರಿಸಿದೆ.

ಕಂದಾಯ ಭೂಮಿ ಕಬಳಿಕೆ ತಡೆಗೆ ಕರ್ನಾಟಕ ಅರಣ್ಯ ಕಾಯ್ದೆ–1963 ಹಾಗೂ 1980ರಲ್ಲಿ ರೂಪಿಸಿದ್ದ ಕಾಯ್ದೆ ಮಾದರಿಯಲ್ಲಿ ಕಾನೂನು ರೂಪಿಸುವಂತೆ ಸಲಹೆ ನೀಡಲು ಸಮಿತಿ ತೀರ್ಮಾನಿಸಿದೆ.

ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದರೆ ಅಥವಾ ಕಬಳಿಸಿದರೆ ಕರ್ನಾಟಕ ಅರಣ್ಯ ಕಾಯ್ದೆ ಪ್ರಕಾರ ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಎರಡು ವರ್ಷಗಳವರೆಗೆ ಶಿಕ್ಷೆ, ದಂಡ ವಿಧಿಸಲು ಅವಕಾಶವಿದೆ. ಸಂರಕ್ಷಿತ ಅರಣ್ಯ, ಜಿಲ್ಲಾ ಅರಣ್ಯ ಪ್ರದೇಶ, ಕಿರು ಅರಣ್ಯ, ಪರಿಭಾವಿತ ಅರಣ್ಯಗಳ (ಡೀಮ್ಡ್‌ ಫಾರೆಸ್ಟ್‌) ಆಧಾರದಲ್ಲಿ ಶಿಕ್ಷೆ, ದಂಡದ ಪ್ರಮಾಣ ನಿರ್ಧರಿಸಲಾಗುತ್ತದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅವರ ಮೇಲ್ಪಟ್ಟದ ಅಧಿಕಾರಿಗಳಿಗೆ ಒತ್ತುವರಿ ತೆರವು ಅಧಿಕಾರ ನೀಡಲಾಗಿದೆ. ಇಂತಹ ನಿಯಮಗಳನ್ನು ರೂಪಿಸುವ ಮೂಲಕ ಕಂದಾಯ ಭೂಮಿ ಕಬಳಿಕೆಗೆ ಸಂಪೂರ್ಣ ಕಡಿವಾಣ ಹಾಕಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಖಾಸಗಿಗೆ ಗೋಮಾಳ; ಬಹಿರಂಗವಾಗದ ವರದಿ
ಗ್ರಾಮೀಣ ಪ್ರದೇಶದ ಕೃಷಿ, ಜಾನುವಾರುಗಳ ಜೀವನಾಡಿಯಾದ ಗೋಮಾಳ ಸೇರಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ–ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ಹೊಸ ನೀತಿ ರೂಪಿಸಲು ಹಿಂದಿನ ಬಿಜೆಪಿ ಸರ್ಕಾರ ಮುಂದಾಗಿತ್ತು. ಈ ಕುರಿತು ಪರಿಶೀಲಿಸಿ, ವರದಿ ನೀಡಲು 2022ರಲ್ಲಿ ಅಂದಿನ ಕಂದಾಯ ಸಚಿವ ಆರ್. ಅಶೋಕ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಸಮಿತಿಯ ಶಿಫಾರಸುಗಳನ್ನು ಸರ್ಕಾರ ಬಹಿರಂಗಪಡಿಸಿಲ್ಲ.

ಬೆಂಗಳೂರು ನಗರ ಜಿಲ್ಲೆಯಲ್ಲಿನ ಸರ್ಕಾರಿ ಜಮೀನು ಒತ್ತುವರಿ ಕುರಿತು ಎ.ಟಿ. ರಾಮಸ್ವಾಮಿ ನೇತೃತ್ವದ ವಿಧಾನಮಂಡಲ ಜಂಟಿ ಸಮಿತಿ 2007ರಲ್ಲಿ ವರದಿ ನೀಡಿತ್ತು.ನಿವೃತ್ತ ಐಎಎಸ್‌ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಅಧ್ಯಕ್ಷತೆಯಲ್ಲಿ ನೇಮಕಗೊಂಡಿದ್ದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯು ರಾಜ್ಯದ ಉದ್ದಗಲಕ್ಕೆ ಲಕ್ಷಾಂತರ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಿತ್ತು. 2011ರಲ್ಲಿ ವರದಿ ನೀಡಿದ ನಂತರ ಜಂಟಿ ಸದನ ಸಮಿತಿ, ಕಾರ್ಯಪಡೆಗಳ ಶಿಫಾರಸಿನಂತೆ ಭೂಕಬಳಿಕೆ ನಿಷೇಧ ಕಾಯ್ದೆಯನ್ನು ರೂಪಿಸಿ, ಜಾರಿಗೊಳಿಸಲಾಗಿತ್ತು. ರೈತರಿಗೆ ಕಿರುಕುಳವಾಗುತ್ತಿದೆ ಎಂಬ ಕಾರಣ ನೀಡಿ ಕಳೆದ ವರ್ಷವಷ್ಟೇ ಮತ್ತೆ ತಿದ್ದುಪಡಿ ತಂದು ಬಿಬಿಎಂಪಿ ಹಾಗೂ ರಾಜ್ಯದ ಎಲ್ಲ ನಗರ ಪಾಲಿಕೆಗಳ ವ್ಯಾಪ್ತಿಯ ಹೊರಗಿನ ಪ್ರದೇಶಗಳನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಚಾಲ್ತಿಯಲ್ಲಿರುವ ಗೂಂಡಾ ಕಾಯ್ದೆ ಸರ್ಕಾರಿ ದಾಖಲೆ ತಿದ್ದಿ ಆರ್ಥಿಕ ವಂಚನೆ ಎಸಗುವ ಪ್ರಕರಣಗಳಿಗೆ ಸೀಮಿತವಾಗಿದೆ. ಹಾಗಾಗಿ, ಆರ್ಥಿಕ ಅಪರಾಧ ಹೊರತಾದ ಭೂ ಕಬಳಿಕೆ ತಡೆಗೆ ಸದ್ಯಕ್ಕೆ ಪ್ರಬಲ ಕಾನೂನುಗಳು ಇಲ್ಲದಂತಾಗಿದೆ.

ರಾಜ್ಯದಲ್ಲಿನ ಕಂದಾಯ ಜಮೀನುಗಳನ್ನು ಅನಧಿಕೃತವಾಗಿ ಸಾಗುವಳಿ ಮಾಡಿದ ರೈತರಿಗೆ ಭೂ ಮಂಜೂರಾತಿ ನೀಡಲು 1990–92ರಲ್ಲಿ ಮೊದಲ ಬಾರಿ ಫಾರಂ 50 ಅಡಿ ಅವಕಾಶ ಕಲ್ಪಿಸಲಾಗಿತ್ತು. ನಂತರ ಫಾರಂ 53 ಅಡಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 50 ಹಾಗೂ 53ರಲ್ಲಿ 20 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೊದಲ ಅರ್ಜಿಗಳಲ್ಲಿ ಶೇ 30ರಷ್ಟು ಇತ್ಯರ್ಥವಾದರೆ, ಎರಡನೇ ಅವಕಾಶದಲ್ಲಿ ಶೇ 10ರಷ್ಟೂ ಇತ್ಯರ್ಥವಾಗಿಲ್ಲ. ಇತ್ಯರ್ಥವಾಗದ ಒತ್ತುವರಿ ಭೂಮಿ 9.97 ಲಕ್ಷ ಎಕರೆ ಇದೆ. ಅರ್ಜಿಗಳನ್ನು ತಿರಸ್ಕರಿಸದೇ ಒತ್ತುವರಿ ತೆರವು ಮಾಡಲು ಈಗಿರುವ ಭೂ ಸುಧಾರಣಾ ಕಾನೂನಿನಲ್ಲಿ ಅವಕಾಶವಿಲ್ಲ. 

ಕಂದಾಯ ಭೂಮಿ ಒತ್ತುವರಿ ತಡೆಗೆ ಅರಣ್ಯ ಮಾದರಿ ಕಾನೂನು ರೂಪಿಸುವ ಕುರಿತು ಸಂಪುಟ ಉಪ ಸಮಿತಿ ಚರ್ಚೆ ನಡೆಸಿದೆ. ಇನ್ನೂ ರೂಪುರೇಷೆ ಅಂತಿಮವಾಗಿಲ್ಲ
-ರಹೀಂ ಖಾನ್‌, ಸದಸ್ಯ, ಸಂಪುಟ ಉಪ ಸಮಿತಿ

2005 ಜನವರಿ 1ಕ್ಕೂ ಮೊದಲು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರ ಜಮೀನುಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 94 ಎ(4) ಅಡಿ ನಮೂನೆ 57ರ ಅಡಿ ಅರ್ಜಿ ಸಲ್ಲಿಸಲು 2018ರಲ್ಲಿ ಸರ್ಕಾರ ಮತ್ತೆ ಅವಕಾಶ ನೀಡಿತ್ತು. 8,57,640 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಕೆಯ ಅವಧಿಯನ್ನು ನಾಲ್ಕು ವರ್ಷಗಳಷ್ಟು ವಿಸ್ತರಿಸಿದ್ದು, ಸಾಗುವಳಿಗೆ ಸರ್ಕಾರವೇ ಉತ್ತೇಜನ ನೀಡಿದಂತಾಗಿತ್ತು.  

ಈಗಾಗಲೇ ಬಹುತೇಕ ಸಾಮೂಹಿಕ ಭೂಮಿ ಕೃಷಿ ಭೂಮಿಯಾಗಿ ಪರಿವರ್ತನೆಯಾಗಿವೆ. 25 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಮನೆ ಮತ್ತು ಗುಡಿಸಲು ನಿರ್ಮಿಸಿರುವವರು ನಮೂನೆ 94 ಸಿ (ಗ್ರಾಮೀಣ) ಮತ್ತು 94 ಸಿಸಿ (ನಗರ) ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಕೋರ್ಟ್‌ ಮೆಟ್ಟಿಲೇರಿದೆ. ಬಗರ್‌ಹುಕುಂ ಅಡಿ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನೂ ಸರ್ಕಾರ ಇತ್ಯರ್ಥಗೊಳಿಸಿದರೆ ಕಂದಾಯ ಭೂಮಿ ಸಂಪೂರ್ಣ ಖಾಲಿಯಾಗಲಿದೆ. ಬಹುಶಃ ಸರ್ಕಾರಿ ಯೋಜನೆಗಳಿಗೂ ಭೂಮಿ ದೊರಕದಂತಾಗಲಿದೆ ಎಂದು ಉಪ ಸಮಿತಿ ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT