ಕೊಪ್ಪಳ: ಅನಾರೋಗ್ಯದಿಂದ ಬಳಲುತ್ತಿದ್ದ ಕೊಪ್ಪಳ ತಾಲ್ಲೂಕಿನ 21 ವರ್ಷದ ಯುವತಿಗೆ ಚಿಕಿತ್ಸೆ ಕೊಡಿಸದೇ ದೇವದಾಸಿ ಪಟ್ಟ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನಾಲ್ಕನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯುವತಿಯ ತಂದೆ ಯಮನೂರಪ್ಪ, ತಾಯಿ ಹುಲಿಗೆವ್ವ ಮತ್ತು ಸಹೋದರಿ ಮೂಕವ್ವ ಅವರನ್ನು ಘಟನೆ ಬಹಿರಂಗವಾದ ದಿನದಂದೇ ಬಂಧಿಸಲಾಗಿತ್ತು. ಮೂಕವ್ವ ಪತಿ ಹನುಮಪ್ಪ ಹರಿಜನ ಪರಾರಿಯಾಗಿದ್ದ.
’ನಾಲ್ಕನೇ ಆರೋಪಿ ಬಂಧನಕ್ಕಾಗಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಕೊಪ್ಪಳ ನಗರದ ಮಳೆ ಮಲ್ಲೇಶ್ವರ ದೇವಸ್ಥಾನದ ಬಳಿಯಿದ್ದ ಹನುಮಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿಸಿದ್ದಾರೆ.