ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರಿಗೆ ಸಿಹಿ ಸುದ್ದಿ; ಮಗ್ಗಗಳಿಗೆ ಉಚಿತ ವಿದ್ಯುತ್‌: ಜವಳಿ ಸಚಿವ ಶಿವಾನಂದ

ರಾಜ್ಯ ಸರ್ಕಾರದಿಂದ 40 ಸಾವಿರ ನೇಕಾರರಿಗೆ ಕೊಡುಗೆ
Published 21 ಅಕ್ಟೋಬರ್ 2023, 9:54 IST
Last Updated 21 ಅಕ್ಟೋಬರ್ 2023, 9:54 IST
ಅಕ್ಷರ ಗಾತ್ರ

ವಿಜಯಪುರ: ಆರ್ಥಿಕ ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ದಸರಾ, ದೀಪಾವಳಿ  ಕೊಡುಗೆಯಾಗಿ ಉಚಿತ ವಿದ್ಯುತ್‌ ನೀಡಲು ಆದೇಶ ಹೊರಡಿಸಿದೆ.  

10 ಎಚ್‌.ಪಿ. ವರೆಗಿನ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ಮಾಸಿಕ ಗರಿಷ್ಠ 250 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಒದಗಿಸುವ ಮೂಲಕ ನೇಕಾರರನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿಲು ಕ್ರಮಕೈಗೊಳ್ಳಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

10 ರಿಂದ 20 ಎಚ್‌.ಪಿ. ವರೆಗಿನ ವಿದ್ಯುತ್‌ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಪ್ರತಿ ಯುನಿಟ್‌ಗೆ ₹1.25ರಂತೆ ರಿಯಾಯಿತಿ ದರದಲ್ಲಿ ಮಾಸಿಕ ಗರಿಷ್ಠ 500 ಯುನಿಟ್‌ ವರೆಗೆ ವಿದ್ಯುತ್‌ ಪೂರೈಸಲಾಗುವುದು ಎಂದು ಅವರು ಹೇಳಿದರು.

ನೇಕಾರರಿಗೆ ಉಚಿತ ವಿದ್ಯುತ್‌ ಪೂರೈಕೆಯಿಂದ ಮಾಸಿಕ ಅಂದಾಜು ₹150 ಕೋಟಿ ಮೊತ್ತವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಭರಿಸಲಾಗುವುದು. ಈ ಯೋಜನೆ ಅನುಷ್ಠಾನದಿಂದ ರಾಜ್ಯದ ಸುಮಾರು 40 ಸಾವಿರ ನೇಕಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ನೇಕಾರರಿಗೆ ಉಚಿತ ವಿದ್ಯುತ್‌ ಒದಗಿಸುವುದಾಗಿ 2023–24ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ನೇಕಾರರಿಗೆ ಉಚಿತ ವಿದ್ಯುತ್‌ ಸಂಪರ್ಕ ಕಲ್ಪಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ ಎಂದು ಅವರು ಹೇಳಿದರು.

ವಿದ್ಯುತ್‌ ಸಹಾಯಧನ ಯೋಜನೆಗೆ ನೋಂದಾಯಿಸಿಕೊಳ್ಳಲು ನೇಕಾರರು ತಮ್ಮ ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌, ಮಗ್ಗದ ಚಿತ್ರ,  ವಿದ್ಯುತ್‌ ಸಂಪರ್ಕ ಹೊಂದಿರುವ ದಾಖಲಾತಿ, ಆರ್‌.ಆರ್‌.ಸಂಖ್ಯೆ, ಬಿಲ್‌ ಮತ್ತು ರಸೀದಿ ಸೇರಿದಂತೆ ಇತರೆ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು.

ಅ.25ರಿಂದ ಕಬ್ಬು ನುರಿಸುವಿಕೆ ಆರಂಭ:

ರಾಜ್ಯದಾದ್ಯಂತ ಸಕ್ಕರೆ ಕಾರ್ಖಾನೆಗಳು ಅ.25ರಿಂದಲೇ ಕಬ್ಬು ನುರಿಸಲು ಆರಂಭಿಸುವಂತೆ ಸರ್ಕಾರ ಹೊಸ ಆದೇಶ ಹೊರಡಿಸಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್‌.ಪಾಟೀಲ ತಿಳಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಕಬ್ಬಿನ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಹಾಗೂ ಈ ಹಿಂದಿನ ಹಂಗಾಮುಗಳಲ್ಲಿ ಸಕ್ಕರೆ ಕಾರ್ಖಾನೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ಅವಧಿಯಲ್ಲಿ ಕಬ್ಬು ನುರಿಸಲು ಆರಂಭಿಸುತ್ತಿರುವುದನ್ನು ತಪ್ಪಿಸಿ, ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಏಕಕಾಲಕ್ಕೆ ಕಬ್ಬು ನುರಿಸುವಿಕೆ ಆರಂಭಿಸಲು ಸಕ್ಕರೆ ಕಾರ್ಖಾನೆಗಳಿಗೆ ಈ ನಿರ್ದೇಶನ ನೀಡಿದ್ದು, ಎಲ್ಲ ಕಾರ್ಖಾನೆಗಳು ಒಪ್ಪಿಗೆ ಸೂಚಿಸಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT