ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೆ 2 ಬಾರಿ ಉಚಿತ ಯೋಗ ತರಬೇತಿ: ಸಚಿವ ದಿನೇಶ್ ಗುಂಡೂರಾವ್

Published 18 ಫೆಬ್ರುವರಿ 2024, 16:06 IST
Last Updated 18 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಆಯುಷ್ ಚಿಕಿತ್ಸಾಲಯಗಳಲ್ಲಿ ಆಯುಷ್ಮಾನ್ ಮಂದಿರಗಳ ಮೂಲಕ ನುರಿತ ಯೋಗ ತರಬೇತುದಾರರಿಂದ ದಿನಕ್ಕೆ ಎರಡು ಬಾರಿ ಉಚಿತ ಯೋಗ ತರಬೇತಿ ಕಾರ್ಯಕ್ರಮ ಜಾರಿಗೆ ತರಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ರಥಸಪ್ತಮಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ಆಯುಷ್ ಇಲಾಖೆ ಮತ್ತು ಯೋಗ ಗಂಗೋತ್ರಿ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ಯೋಗ ಮತ್ತು 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಶಾರೀರಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಬೆಳೆಸಿಕೊಳ್ಳಬಹುದು’ ಎಂದರು.

‘ಸೂರ್ಯ ನಮಸ್ಕಾರ, ಇತರ ಆಸನಗಳು, ಪ್ರಾಣಾಯಾಮ ಹಾಗೂ ಧ್ಯಾನ ಮತ್ತಿತರ ಅಭ್ಯಾಸಗಳಿಂದ ದೇಹ, ಮನಸ್ಸು ಚುರುಕುಗೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಧುನಿಕ ಜಗತ್ತಿನ ಬದಲಾದ ಜೀವನ ಶೈಲಿಯಿಂದ ಉಂಟಾಗುವ ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಸೂರ್ಯ ನಮಸ್ಕಾರದಂಥ ಯೋಗಾಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಮಾತನಾಡಿ, ‘ಮನಸ್ಸು ಮತ್ತು ಆರೋಗ್ಯ ಚೆನ್ನಾಗಿರಬೇಕೆಂದರೆ ಯೋಗ ಅಭ್ಯಾಸ ಅತ್ಯವಶ್ಯಕವಾಗಿದೆ. ನಾನು ಕೂಡಾ ಕಳೆದ ಕೆಲವು ವರ್ಷಗಳಿಂದ ಯೋಗಭ್ಯಾಸ ಮಾಡುತ್ತಿರುವುದರಿಂದ ಬಹಳಷ್ಟು ಬದಲಾಗಿದ್ದೇನೆ. ಸೂರ್ಯ ನಮಸ್ಕಾರ ಮಾಡುವುದು ಸ್ವಲ್ಪ ಕಷ್ಟವಾದರೂ, ಇದರಿಂದ ಸದೃಢವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದ್ದರಿಂದ, ಎಲ್ಲರೂ ಯೋಗಭ್ಯಾಸ ಮತ್ತು ಸೂರ್ಯ ನಮಸ್ಕಾರ ಮಾಡುವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಆಯುಷ್ ಇಲಾಖೆಯ ಆಯುಕ್ತ ಶ್ರೀನಿವಾಸಲು, ಯೋಗ ಗಂಗೋತ್ರಿ ಸಂಸ್ಥೆಯ ಪ್ರಮುಖರಾದ ಡಾ. ಆರಾಧ್ಯ ಗುರುರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT