ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಬಸ್ ಖರೀದಿ: ಮಕ್ಕಳಿಗಾಗಿ ಅನ್ನೇಹಾಳ್‌ ಗ್ರಾಮಸ್ಥರ ನೆರವು

Last Updated 2 ಸೆಪ್ಟೆಂಬರ್ 2018, 20:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೂರು ವರ್ಷ ಮುಚ್ಚಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮರು ತೆರೆದ ಅನ್ನೇಹಾಳ್‌ ಗ್ರಾಮಸ್ಥರು, ಅಕ್ಕಪಕ್ಕದ ಹಳ್ಳಿಗಳ ಮಕ್ಕಳನ್ನು ಶಾಲೆಗೆ ಕರೆತರಲು ಬಸ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಶಾಲಾ ವಾಹನಕ್ಕೆ ಚಾಲಕ, ಸಹಾಯಕರನ್ನು ನೇಮಿಸಿ ತಿಂಗಳಿಗೆ ₹ 4 ಸಾವಿರ ವೇತನ ಪಾವತಿಸುತ್ತಿದ್ದಾರೆ.

ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಹಳ್ಳಿ ಶಾಲೆಯ ಮಕ್ಕಳು ಜುಲೈನಿಂದ ಶಾಲಾ ವಾಹನದಲ್ಲಿ ಪ್ರಯಾಣಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಮನೆ ಬಾಗಿಲಿಗೆ ಬರುವ ವಾಹನ, ಶಾಲೆ ಮುಗಿದ ಬಳಿಕ ಅಷ್ಟೇ ಆಸ್ಥೆಯಿಂದ ಮಕ್ಕಳನ್ನು ಮನೆಗೆ ಕರೆತರುತ್ತಿದೆ.

ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿರುವ ಸೌಲಭ್ಯಗಳನ್ನು ಹೊಂದಿರುವ ಅನ್ನೇಹಾಳ್‌ ಸರ್ಕಾರಿ ಶಾಲೆ ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ. ಗೊಡೆಬನಹಾಳ್‌, ಚಿತ್ರದುರ್ಗದ ಕಾನ್ವೆಂಟ್‌ ಶಾಲೆಗೆ ತೆರಳುತ್ತಿದ್ದ ಹಳ್ಳಿ ಮಕ್ಕಳು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಮರು ಆರಂಭಗೊಂಡ ಒಂದೇ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 68ರಿಂದ 140ಕ್ಕೆ ಏರಿಕೆಯಾಗಿದೆ.

ಮರುಜೀವ ಪಡೆದ ಶಾಲೆ: ಖಾಸಗಿ ಶಾಲೆಯ ವ್ಯಾಮೋಹದಿಂದಾಗಿ ಪೋಷಕರು ಮಕ್ಕಳನ್ನು ಕಾನ್ವೆಂಟ್‌ ಶಾಲೆಯ ಬಸ್‌ ಹತ್ತಿಸಲು ಶುರು ಮಾಡಿದ ಬಳಿಕ ಸರ್ಕಾರಿ ಶಾಲೆ ಕಳೆಗುಂದಿತ್ತು. ಮಕ್ಕಳ ಕೊರತೆಯ ನೆಪವೊಡ್ಡಿ 2013–14ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯನ್ನು ಶಿಕ್ಷಣ ಇಲಾಖೆ ಮುಚ್ಚಿತ್ತು.

ಹೊರೆಯಾದ ಶುಲ್ಕ: ‘ಕಾನ್ವೆಂಟ್‌ ಶಾಲೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ಪ್ರತಿ ವಿದ್ಯಾರ್ಥಿಗೆ ₹ 2 ಸಾವಿರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಯಿತು. ಶುಲ್ಕ ಪಾವತಿಸುವ ಸಾಮರ್ಥ್ಯ ಇಲ್ಲದ ಮಕ್ಕಳಿಗೆ ಪ್ರವೇಶ ನೀಡುವುದಿಲ್ಲವೆಂದು ಆಡಳಿತ ಮಂಡಳಿ ನಿರ್ಧಾರ ಪ್ರಕಟಿಸಿತು. ಆಡಳಿತ ಮಂಡಳಿಯ ದರ್ಪದ ಫಲವಾಗಿ ನಮ್ಮೂರ ಶಾಲೆ ಮರು ಆರಂಭಗೊಂಡಿತು’ ಎಂದು ಹೇಳುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಟಿ. ಪ್ರಕಾಶ್‌.

68 ಮಕ್ಕಳು ಮರಳಿ ಸರ್ಕಾರಿ ಶಾಲೆ ಸೇರಲು ಸಿದ್ಧರಾಗಿದ್ದರಿಂದ 2017ರ ಜೂನ್‌ ತಿಂಗಳಲ್ಲಿ ಶಿಕ್ಷಣ ಇಲಾಖೆ ಶಾಲೆಯನ್ನು ಮರು ಆರಂಭ ಮಾಡಿತು. ಪಾಳು ಬಿದ್ದಿದ್ದ ಕಟ್ಟಡವನ್ನು ಗ್ರಾಮಸ್ಥರೇ ದುರಸ್ತಿಗೊಳಿಸಿದರು. ಪಕ್ಕದ ಊರಿನ ಮುಖ್ಯಶಿಕ್ಷಕ ರುದ್ರಮುನಿ ಸೇರಿದಂತೆ ಮೂವರು ಶಿಕ್ಷಕರನ್ನು ಸರ್ಕಾರ ನಿಯೋಜಿಸಿತು. ನೌಕರಿಯಲ್ಲಿರುವ ಅನೇಕರು ನೀಡಿದ ಆರ್ಥಿಕ ನೆರವಿನಿಂದ 6 ಹೆಚ್ಚುವರಿ ಶಿಕ್ಷಕರನ್ನು ಗ್ರಾಮಸ್ಥರೇ ನೇಮಕ ಮಾಡಿಕೊಂಡು ತಿಂಗಳಿಗೆ ₹ 6 ಸಾವಿರ ವೇತನವನ್ನು ನೀಡುತ್ತಿದ್ದಾರೆ.

**

ಸೊಂಡೆಕೆರೆ ಸೇರಿ ಹಲವು ಗ್ರಾಮಗಳ ಮಕ್ಕಳು ಪ್ರವೇಶಕ್ಕೆ ಆಸಕ್ತಿ ತೋರಿದ್ದರು. ಕಟ್ಟಡ ಕಿರಿದಾಗಿದ್ದರಿಂದ ಪ್ರವೇಶ ನೀಡಿಲ್ಲ.

-ಗುರುಶಾಂತಪ್ಪ, ಉಪಾಧ್ಯಕ್ಷ, ಹಳೆ ವಿದ್ಯಾರ್ಥಿಗಳ ಸಂಘ

**

ಗುಣಮಟ್ಟದ ಶಿಕ್ಷಣ ನೀಡಲು 4 ಕಂಪ್ಯೂಟರ್‌ ತಂದಿದ್ದೇವೆ. ಸ್ಮಾರ್ಟ್‌ ಕ್ಲಾಸ್‌ಗೆ ಅಗತ್ಯವಿರುವ ಉಪಕರಣಗಳನ್ನು ದಾನಿಯೊಬ್ಬರು ನೀಡಿದ್ದಾರೆ.
-ಎಚ್‌.ಬಿ. ಸಿದ್ದೇಶ್‌,ಅಧ್ಯಕ್ಷ, ಹಳೆ ವಿದ್ಯಾರ್ಥಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT