ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತ: ತುರ್ತು ಚಿಕಿತ್ಸೆಗೆ ಹೊಸ ಯೋಜನೆ

ಜಯದೇವ ಹೃದ್ರೋಗ ಸಂಸ್ಥೆ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ
Last Updated 25 ಜನವರಿ 2022, 5:03 IST
ಅಕ್ಷರ ಗಾತ್ರ

ಬೆಂಗಳೂರು: ಹೃದಯಾಘಾತ ಪ್ರಕರಣಗಳಲ್ಲಿ ಆಯಾ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲೇ ತುರ್ತು ಚಿಕಿತ್ಸೆ ನೀಡಿ, ನಂತರದಲ್ಲಿ ನಿಯೋಜಿತ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಹೊಸ ಯೋಜನೆಯೊಂದನ್ನು ಜಾರಿಗೊಳಿಸುವ ಪ್ರಸ್ತಾವಕ್ಕೆ ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತ ಮಂಡಳಿ ಸೋಮವಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ನೇತೃತ್ವದಲ್ಲಿ ರಾಜ್ಯದ ಆಯ್ದ 75 ತಾಲ್ಲೂಕುಗಳಲ್ಲಿ ಪ್ರಸಕ್ತ ವರ್ಷದಿಂದಲೇ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ವ್ಯಾಪ್ತಿಯ ತಲಾ 15 ತಾಲ್ಲೂಕುಗಳು ಹಾಗೂ ಮಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ 15 ತಾಲ್ಲೂಕುಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತಿದೆ. ತಲಾ 15 ತಾಲ್ಲೂಕುಗಳನ್ನು ಒಂದು ಹೃದ್ರೋಗ ಚಿಕಿತ್ಸಾ ಕೇಂದ್ರದ ಅಡಿಯಲ್ಲಿ ತರುವ ಪ್ರಸ್ತಾವವಿದೆ.

‘ಹಬ್‌ ಅಂಡ್‌ ಸ್ಪೋಕ್‌ ಮಾದರಿ’ ಎಂದು ನೂತನ ಯೋಜನೆಗೆ ಹೆಸರಿಸಲಾಗಿದೆ. ಏಜೆನ್ಸಿಯೊಂದರ ಮೂಲಕ ಆಯ್ದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗೆ ಹೃದಯಾಘಾತಕ್ಕೆ ಒಳಗಾದವರಿಗೆತುರ್ತು ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಲಾಗುತ್ತಿದೆ. ಆ ಎಲ್ಲ ಆಸ್ಪತ್ರೆಗಳಿಗೂ ತುರ್ತು ಚಿಕಿತ್ಸಾ ಕಿಟ್‌ ಕೂಡ ಪೂರೈಸಲಾಗುತ್ತದೆ. ಆರಂಭದಲ್ಲಿ ಅಲ್ಲಿ ಚಿಕಿತ್ಸೆ ನೀಡಿ, ತಕ್ಷಣ ನಿಯೋಜಿತ ಹೃದ್ರೋಗ ಕೇಂದ್ರಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಆಂಬುಲೆನ್ಸ್‌ ಕೂಡ ಒದಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಉಪ ಕೇಂದ್ರ ಆರಂಭಕ್ಕೆ ಒಪ್ಪಿಗೆ: ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯಿಂದ 50 ಹಾಸಿಗೆಗಳ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾ ಉಪ ಕೇಂದ್ರವನ್ನು ಜೂನ್‌ ತಿಂಗಳಲ್ಲಿ ಆರಂಭಿಸುವ ಪ್ರಸ್ತಾವಕ್ಕೂ ಆಡಳಿತ ಮಂಡಳಿ ಸಭೆ ಒಪ್ಪಿಗೆ ನೀಡಿದೆ.

ನಿರ್ದೇಶಕರಿಗೆ ಪ್ರಶಂಸೆ: ‘ಜಯದೇವ ಹೃದ್ರೋಗ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಇದಕ್ಕೆ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅವರ ಸಾರಥ್ಯವೇ ಕಾರಣ’ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಪ್ರಶಂಸಿಸಿದ್ದಾರೆ.

ಸಂಸ್ಥೆಯ ಮುಂದಿನ ಯೋಜನೆಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಬಜೆಟ್‌ನಲ್ಲಿ ಎಲ್ಲ ರೀತಿಯ ನೆರವು ಒದಗಿಸಲಾಗುವುದು ಎಂದು ಬೊಮ್ಮಾಯಿ ಸಭೆಯಲ್ಲೇ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹುಬ್ಬಳ್ಳಿಯಲ್ಲಿ ಜಯದೇವ ಕೇಂದ್ರ
ಜಯದೇವ ಹೃದ್ರೋಗ ಸಂಸ್ಥೆಯಿಂದ ಹುಬ್ಬಳ್ಳಿಯಲ್ಲಿ 350 ಹಾಸಿಗೆಗಳ ಸಾಮರ್ಥ್ಯದ ಹೃದ್ರೋಗ ಚಿಕಿತ್ಸಾ ಕೇಂದ್ರ ಆರಂಭಿಸುವ ಪ್ರಸ್ತಾವಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಸಭೆ ಸೋಮವಾರ ಅನುಮೋದನೆ ನೀಡಿದೆ.

ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಈ ಕೇಂದ್ರ ಸ್ಥಾಪನೆಗೆ ಜಯದೇವ ಹೃದ್ರೋಗ ಸಂಸ್ಥೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಒಪ್ಪಿಗೆ ನೀಡಿದ್ದು, ಅಗತ್ಯವಿರುವ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT