ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಮತದಾರರ ಎಡಗೈ ಹೆಬ್ಬೆರಳಿಗೆ ಶಾಯಿ

ಒಟ್ಟು 94,492 ಬಾಟಲಿ ಶಾಯಿ ಮತ್ತು ಅರಗು ಹಂಚಿಕೆ
Last Updated 17 ಡಿಸೆಂಬರ್ 2020, 20:17 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದಲ್ಲಿ ಡಿ.22 ಮತ್ತು ಡಿ.27ರಂದು ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರನ ‘ಎಡಗೈ ಹೆಬ್ಬೆರಳಿಗೆ‌’ ಅಳಿಸಲಾಗದ ಶಾಯಿ ಹಚ್ಚಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ.

ಇತ್ತೀಚೆಗೆ ವಿಧಾನಸಭೆ ಉಪ ಚುನಾವಣೆ, ವಿಧಾನ ಪರಿಷತ್‌ ಚುನಾವಣೆ ಹಾಗೂ ಸಹಕಾರ ಸಂಘದ ಚುನಾವಣೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ಗೊಂದಲ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣಾಧಿಕಾರಿಗಳಿಗೆ ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಚನೆಗಳನ್ನು ನೀಡಬೇಕು ಎಂದು ಆಯೋಗ ತಿಳಿಸಿದೆ.

44,996 ಮತಗಟ್ಟೆಗಳು: ರಾಜ್ಯದ 30 ಜಿಲ್ಲೆಗಳ 5,762 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, 44,996 ಮತಗಟ್ಟೆಗಳನ್ನು ಗುರುತಿಸಲಾಗಿದೆ. ತಲಾ ಮತಗಟ್ಟೆಗೆ 5 ಸಿ.ಸಿ.ಯ ಎರಡು ಶಾಯಿ ಬಾಟಲಿಗಳಂತೆ 89,992 ಬಾಟಲಿಗಳನ್ನು ‘ಮೈಸೂರು ಪೇಂಟ್ಸ್‌ ಅಂಡ್‌ ವಾರ್ನಿಶ್’ ಸಂಸ್ಥೆಯಿಂದ ಖರೀದಿಸಿ, ಚುನಾವಣಾ ಆಯೋಗ ವಿತರಣೆ ಮಾಡಿದೆ. ಅಷ್ಟೇ ಅಲ್ಲದೆ ಪ್ರತಿ ಮತಗಟ್ಟೆಗೆ ಶೇ 5ರಷ್ಟು ಹೆಚ್ಚುವರಿ ಬಾಟಲಿಗಳನ್ನು ನೀಡಿದ್ದು, ಒಟ್ಟಾರೆ 94,492 ಶಾಯಿ ಬಾಟಲಿಗಳನ್ನು ವಿತರಣೆ ಮಾಡಲಾಗಿದೆ.

ಅರಗು ಹಂಚಿಕೆ: ರಾಜ್ಯದ 44,996 ಮತಗಟ್ಟೆಗಳಿಗೆ 1.34 ಲಕ್ಷ ಅರಗು ಪಾಕೆಟ್‌ಗಳನ್ನು ಹಾಗೂ ಹೆಚ್ಚುವರಿಯಾಗಿ 20 ಕಡ್ಡಿ ಇರುವ 450 ಗ್ರಾಂನ 6,749 ಪಾಕೆಟ್‌ಗಳನ್ನು ವಿತರಣೆ ಮಾಡಲಾಗಿದೆ. ಇವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರ ಮಾಡಿ, ಪಾರದರ್ಶಕ ಚುನಾವಣೆ ನಡೆಸಲು ತಿಳಿಸಿದೆ.

ತಹಶೀಲ್ದಾರ್‌ಗಳಿಗೆ ವಿತರಣೆ: ‘‌ಹಾವೇರಿಯ 209 ಗ್ರಾಮ ಪಂಚಾಯಿತಿಗಳಲ್ಲಿ 1,380 ಮತಗಟ್ಟೆಗಳನ್ನು ಗುರುತಿಸಲಾಗಿದೆ. 4,140 ಅರಗು ಪಾಕೆಟ್‌ ಮತ್ತು 2,898 ಶಾಯಿ ಬಾಟಲಿಗಳು ಬಂದಿವೆ. ಈಗಾಗಲೇ ತಾಲ್ಲೂಕಿನ ತಹಶೀಲ್ದಾರ್‌ಗಳಿಗೆ ಇವುಗಳನ್ನು ವಿತರಿಸಲಾಗುತ್ತಿದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದು, ಸುಸೂತ್ರವಾಗಿ ಚುನಾವಣೆ ನಡೆಯಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘1600 ಕೋವಿಡ್‌ ಕಿಟ್‌’
‘ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಪ್ರತಿ ಮತಗಟ್ಟೆಗಳಿಗೆ ‘ಕೋವಿಡ್‌ ಕಿಟ್‌’ ಅನ್ನು ರಾಜ್ಯ ಚುನಾವಣಾ ಆಯೋಗ ಪೂರೈಕೆ ಮಾಡುತ್ತಿದೆ. ಹಾವೇರಿ ಜಿಲ್ಲೆಗೆ 1,600 ಕೋವಿಡ್‌ ಕಿಟ್‌ಗಳು ಬಂದಿವೆ. ಪ್ರತಿ ಕಿಟ್‌ನಲ್ಲಿ 6 ಫೇಸ್‌ ಶೀಲ್ಡ್‌ಗಳು‌, 20 ಮಾಸ್ಕ್‌ಗಳು‌, 100 ಎಂ.ಎಲ್‌.ನ 6 ಸ್ಯಾನಿಟೈಸರ್‌ ಬಾಟಲಿಗಳು ಹಾಗೂ ಮತದಾರರಿಗೆ ಹಾಕಲು 500 ಎಂ.ಎಲ್‌.ನ ಎರಡು ಸ್ಯಾನಿಟೈಸರ್‌ ಬಾಟಲಿಗಳು ಹಾಗೂ ಒಂದು ಥರ್ಮಲ್‌ ಸ್ಕ್ಯಾನರ್‌ ಉಪಕರಣಗಳಿವೆ’ ಎಂದು ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT