ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ | ಹೆಚ್ಚಿದ ಬಿರುಬಿಸಿಲು: ಜಾನುವಾರುಗಳಿಗೆ ಸಂಕಷ್ಟ

ಎಚ್.ಎಸ್.ಘಂಟಿ
Published 1 ಮೇ 2024, 22:54 IST
Last Updated 1 ಮೇ 2024, 22:54 IST
ಅಕ್ಷರ ಗಾತ್ರ

ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣ ಹೊರತುಪಡಿಸಿದರೆ ತಾಲ್ಲೂಕಿನಲ್ಲಿ 38 ಗ್ರಾಮಗಳಿದ್ದು ಇಲ್ಲಿ ಕೆರೆ, ಬಾವಿ, ಹಳ್ಳ ಕೊಳ್ಳಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದರಿಂದ ಪ್ರಾಣಿ ಪಕ್ಷಿಗಳು ಹೆಚ್ಚಿದ ಬಿರುಬಿಸಿಲಿನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ.

ತಾಲ್ಲೂಕಿನ ಕೊಟ್ನಳ್ಳಿ, ಸಬ್ಬಲಹುಣಸಿ, ನಾಗರಾಳ ಎಸ್.ಪಿ, ಹಾನಾಪುರ, ಹುಲ್ಲಿಕೇರಿ ಎಸ್.ಪಿ ಮುಂತಾದ ಗ್ರಾಮಗಳಲ್ಲಿ ಹೆಚ್ಚು ಕುರಿ ಸಾಕಾಣಿಕೆಯ ಕುರಿಗಾರರಿದ್ದು ಬಿಸಿಲಿನ ತಾಪಮಾಣದಿಂದ ಕುರಿಗಳನ್ನು ರಕ್ಷಣೆ ಮಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ.

ಬಿರುಬಿಸಿಲಿನಿಂದ ಬೇಸತ್ತು ಕುರಿ ಮೇಯಿಸುವ ವೇಳೆಯನ್ನು ಬದಲಾಯಿಸಿಕೊಂಡಿದ್ದಾರೆ. ಬೆಳಿಗ್ಗೆ 8 ರಿಂದ 11 ಗಂಟೆ ಸಂಜೆ 4 ರಿಂದ 6 ಗಂಡೆಯವರೆಗೆ ಮಾತ್ರ ಮೇಕೆ, ಕುರಿ ಮೇಯಿಸಲು ಹೋಗುತ್ತಾರೆ. ಮಧ್ಯಾಹ್ನ ಮಾತ್ರ ಗಿಡದ ನೆರಳಿನ ಅಶ್ರಯ ಪಡೆಯುತ್ತಾರೆ. ಜಲ ಮೂಲಗಳು ಬತ್ತಿದ್ದರಿಂದ ನೀರಿಗಾಗಿ ತಮ್ಮ ಗ್ರಾಮಗಳನ್ನು ಅದು ನಲ್ಲಿ ನೀರನ್ನು ಅವಲಂಬಿಸುವ ಸ್ಥಿತಿ ಎದುರಾಗಿದೆ.

'ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಕುರಿ ಮತ್ತು ಟಗರುಗಳು ಎದೆ ಒಡೆದುಕೊಂಡು ಸತ್ತಿರುವ ಪ್ರಕರಣಗಳಿವೆ. ಇದನ್ನು ತಪ್ಪಿಸಲು ಗ್ರಾಮದ ಹಲವು ಸೆಡ್ ಅಥವಾ ಮನೆಯಲ್ಲಿ ಪ್ರತೇಕವಾಗಿ ರೂಮ್ ಮಾಡಿ ಅಲ್ಲಿ ಟಗರುಗಳಿಗೆ ಪ್ಯಾನ್ ಹಚ್ಚಲಾಗುತ್ತಿದೆ’ ಎಂದು ಸಬ್ಬಲಹುಣಸಿಯ ಕುರಿಗಾರ ಮಲ್ಲಪ್ಪ ನಡಶೇಸಿ ಹೇಳುತ್ತಾರೆ.

ಇನ್ನು ದನಕರುಗಳ ಸ್ಥಿತಿ ಬೇರೆಯದ್ದೇ ಇದೆ. ಬಿಸಿಲಿನ ತಾಪಕ್ಕೆ ಸಾಮೂಹಿಕ ದನ ಮೇಯಿಸುವುದನ್ನು ಹಳ್ಳಿಗಳಲ್ಲಿ ನಿಲ್ಲಿಸಿದ್ದಾರೆ ದನದ ಮಾಲಿಕರು ಮನೆಯಲ್ಲಿಯೇ ಅವುಗಳಿಗೆ ಮೇವು ನೀರನ್ನು ನೀಡಲಾಗುತ್ತಿದೆ. ಸ್ಥಳೀಯವಾಗಿ ಮೇವಿನ ಕೊರತೆ ಇಲ್ಲ ಬೇರೆ ಬೇರೆ ಕಡೆಯಿಂದ ಮೇವು ತರಿಸಿ ಸಂಗ್ರಹಿಸಿದ್ದಾರೆ.

ಬತ್ತಿದ ದೊಡ್ಡ ಕೆರೆಗಳು: ಪ್ರತಿವರ್ಷ ಮಳೆಗಾಲದವರೆಗೇ ನೀರು ಇರುತ್ತಿದ್ದ ಪರ್ವತಿ ಗ್ರಾಮದ ಹತ್ತಿರದ ಗಂಜಿಗೆರೆ, ಕೋಟೆಕಲ್ ಕೆರೆ, ಹಿರೇಬೂದಿಹಾಳ ಮುಂತಾದ ದೊಡ್ಡ ಕೆರೆಗಳಲ್ಲಿ ನೀರಿಲ್ಲವಾಗಿ ಪ್ರಾಣಿ-ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ.

ನೀರಿನ ತೊಟ್ಟಿಗಳ ಆಶ್ರಯ: ಗ್ರಾಮಗಳಲ್ಲಿ ಪಂಚಾಯಿತಿಯ ಆಶ್ರಯದಲ್ಲಿ ಕುಡಿಯುವ ನೀರಿಗಾಗಿ ತೊಟ್ಟಿಗಳ ನಿರ್ಮಾಣ ಮಾಡಿರುತ್ತಾರೆ ಇವು ದನಕರು, ಕುರಿಗಳಿಗೆ ಅನುಕೂಲವಾಗಿವೆ. ಕೆಲವು ಗ್ರಾಮಗಳಲ್ಲಿ ಇನ್ನೂ ತೊಟ್ಟಿಗಳು ನಿರ್ಮಾಣವಾಗಿಲ್ಲ ಅಂತಹ ಗ್ರಾಮಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಬೇಕಾದ ಅಗತ್ಯತೆ ಇದೆ ಎಂದು ಸಾರ್ವಜನಿಕರು ಹೇಳುತ್ತಾರೆ.

‘ಬೇಸಿಗೆಯಲ್ಲಿ ಜಾನುವಾರುಗಳಿಗಳಿಗೆ ಉತ್ತಮವಾದ ನೀರನ್ನು ಕುಡಿಸಬೇಕು. ಗ್ರಾಮದಲ್ಲಿ ದನಕರು ಮತ್ತು ಕುರಿಗಳಿಗಾಗಿ ಗ್ರಾಮದಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿರುತ್ತದೆ. ಹೀಗಾಗಿ ಪಶುಗಳಿಗೆ ಸದ್ಯ ಯಾವುದೇ ರೋಗಗಳು ಕಂಡು ಬಂದಿಲ್ಲ‘ ಎಂದು ಇಲ್ಲಿನ ಪಶು ವೈದ್ಯಾಧಿಕಾರಿ ಡಾ.ಸುರೇಶ ಜಾಧವ ಹೇಳಿದರು.

ಸಂಪೂರ್ಣವಾಗಿ ಬತ್ತಿದ ಪರ್ವತಿ ಗ್ರಾಮದ ಸಮೀಪದ ಗಂಜಿಗೆರೆ
ಸಂಪೂರ್ಣವಾಗಿ ಬತ್ತಿದ ಪರ್ವತಿ ಗ್ರಾಮದ ಸಮೀಪದ ಗಂಜಿಗೆರೆ
ಬೇಸಿಗೆಯಾದ್ದರಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಕುರಿಗಾರರು ಆಹಾರಕ್ಕಾಗಿ ಬೆಳಿಗ್ಗೆ 8 ರಿಂದ 11ರವರೆಗೆ ಮೇಯಿಸಿ ನಂತರ ಗಿಡದ ನೆರಳಿನಲ್ಲಿ ವಿಶ್ರಾಂತಿ ಪಡೆಯಬೇಕು
ಡಾ.ಸುರೇಶ ಜಾಧವ ಪಶು ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT