ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಘವೇಂದ್ರ ಬ್ಯಾಂಕ್‌ ವಂಚನೆ ಪ್ರಕರಣ ಸಿಬಿಐಗೆ ವಹಿಸಿ: ಆಗ್ರಹ

Last Updated 12 ಜುಲೈ 2021, 10:02 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವನಗುಡಿಯಲ್ಲಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ್‌ ಗುಹಾ ದ್ವಾರಕನಾಥ್‌ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ‘ಈ ಹಗರಣದ ಬಗ್ಗೆ ಪ್ರಕರಣ ದಾಖಲಾಗಿ ಎರಡು ವರ್ಷಗಳು ಕಳೆದಿವೆ. ಹೀಗಿದ್ದರೂ ಠೇವಣಿದಾರರಿಗೆ ನ್ಯಾಯ ಸಿಕ್ಕಿಲ್ಲ. ಹಣ ಕಳೆದುಕೊಂಡ ಕೊರಗಿನಲ್ಲೇ 70 ಜನ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಅಸುನೀಗಿದ್ದಾರೆ. ಈ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಲಾಗಿದೆ. ಅದರಿಂದಲೂ ಪ್ರಯೋಜನ ಆಗಿಲ್ಲ’ ಎಂದರು.

‘ಗುರುರಾಘವೇಂದ್ರ ಬ್ಯಾಂಕ್‌ಗೆ ಸತತವಾಗಿ ‘ಎ’ ದರ್ಜೆಯ ಪ್ರಮಾಣ ಪತ್ರ ನೀಡಲಾಗಿದೆ. ಇಂತಹ ವಂಚಕ ಬ್ಯಾಂಕ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಈ ಪ್ರಮಾಣಪತ್ರ ನೀಡಿದ್ದಾದರೂ ಹೇಗೆ. ವಿವಿಧ ಕಡೆ ಶಾಖಾ ಕಚೇರಿಗಳನ್ನು ತೆರೆಯಲು ಅನುಮತಿ ನೀಡಿರುವುದರ ಹಿಂದಿನ ಉದ್ದೇಶವೇನು. ಈ ಬಗ್ಗೆ ಸಂಸದರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಸಂಸದರು ಹಾಗೂ ಶಾಸಕರಿಂದ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ. ಹೀಗಾಗಿ ಮುಖ್ಯಮಂತ್ರಿಯವರೇ ಮಧ್ಯ ಪ್ರವೇಶಿಸಬೇಕು. ಇದೇ 14ರಂದು ಆಡಿಟ್‌ ವರದಿ ನೀಡುವುದಾಗಿ ಹೇಳಿದ್ದಾರೆ. ಕೊಡದಿದ್ದರೆ ‘ಆರ್‌ಬಿಐ ಚಲೋ’ ಅಭಿಯಾನ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಠೇವಣಿದಾರ ಹರೀಶ್‌ ‘ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟವರ ಪೈಕಿ ಹಿರಿಯನಾಗರಿಕರೇ ಅಧಿಕ ಮಂದಿ ಇದ್ದಾರೆ. ಹೋದ ವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಗರಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅವರನ್ನು ಸಂಪರ್ಕಿಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೆವು. ನನ್ನನ್ನು ಕೇಳಿ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಟ್ಟಿದ್ದಿರೇ ಎಂದು ಪ್ರಶ್ನಿಸಿದರು. ಅವರ ಬೇಜವಾಬ್ದಾರಿಯುತ ಹೇಳಿಕೆಯಿಂದ ತುಂಬಾ ನೋವಾಯಿತು’ ಎಂದರು.

‘ಈ ಹಗರಣದಲ್ಲಿ ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ ಅವರ ಪಾತ್ರವೂ ಇದೆ. ಅವರು ₹12 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಒಟ್ಟು 25 ಸಾವಿರ ಜನ ಹಣ ಕಳೆದುಕೊಂಡಿದ್ದು, ₹2,120 ಕೋಟಿ ಮೊತ್ತ ಗ್ರಾಹಕರಿಗೆ ಮರಳಿಸಬೇಕಿದೆ. ಇದೆಲ್ಲಾ ಗೊತ್ತಿದ್ದರೂ ಆರ್‌ಬಿಐ ಕಣ್ಣುಮುಚ್ಚಿ ಕುಳಿತುಕೊಂಡಿದೆ. ಆಡಿಟ್‌ ವರದಿ ನೆಪ ಮುಂದಿಟ್ಟು ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ’ ಎಂದು ದೂರಿದರು.

ಪಾಲಿಕೆಯ ಮಾಜಿ ಸದಸ್ಯ ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT