ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗುವುದು ಮೋದಿಗಷ್ಟೇ ಗೊತ್ತು: ದೇವೇಗೌಡ

Published 13 ಜನವರಿ 2024, 16:07 IST
Last Updated 13 ಜನವರಿ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ಎಚ್.ಡಿ. ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾಗುವ ವಿಷಯ ನನಗೆ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ಕೇಂದ್ರ ಸಂಪುಟಕ್ಕೆ ಕುಮಾರಸ್ವಾಮಿ ಸೇರ್ಪಡೆ ಕುರಿತು ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಸಚಿವರಾಗುವ ಸಾಧ್ಯತೆಯನ್ನು ಅಲ್ಲಗಳೆಯಲಿಲ್ಲ.

‘ಮೋದಿಯವರು ಮೊದಲ ಬಾರಿ ಸಂಸದರಾದವರನ್ನು ಮಂತ್ರಿ ಮಾಡಿದ್ದಾರೆ, ಮೊದಲ ಬಾರಿಗೆ ಗೆದ್ದವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಮೋದಿಯವರ ತಂತ್ರಗಾರಿಕೆ, ಯೋಜನೆಗಳೇನು ಎಂಬುದು ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ. ಈ ವಿಷಯದಲ್ಲಿ ಅವರ ಭಾವನೆ ಏನಿದೆಯೋ ಎಂಬುದು ನನಗೆ ಗೊತ್ತಿಲ್ಲ. ನನ್ನ ಬಳಿ ಈ ಬಗ್ಗೆ ಚರ್ಚೆ ನಡೆಸಿಲ್ಲ’ ಎಂದರು.

ಲೋಕಸಭೆ ಚುನಾವಣೆಗೆ ಕುಮಾರಸ್ವಾಮಿ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೂ, ‘ಮೋದಿಯವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅವರು ಏನು ಹೇಳುತ್ತಾರೋ ನೋಡೋಣ. ಮೋದಿಯವರು ಹೇಳಿದ್ದನ್ನು ಕುಮಾರಸ್ವಾಮಿ ಕೇಳುತ್ತಾರೆ. ಅವರು ಸ್ಪರ್ಧಿಸುವ ಪರಿಸ್ಥಿತಿ ಎದುರಾದರೆ ಎಲ್ಲರೂ ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತೇವೆ’ ಎಂದರು. 

ಸ್ಪರ್ಧೆ ಇಲ್ಲ

‘ನನಗೀಗ 92 ವರ್ಷ. ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜ್ಯಸಭೆಯ ಅವಧಿ ಎರಡೂವರೆ ವರ್ಷವಿದೆ. ಚುನಾವಣೆ ವೇಳೆ ಮೈತ್ರಿ ಕೂಟದ ಪರವಾಗಿ ಪ್ರಚಾರ ಮಾಡುತ್ತೇನೆ. ಬಿಜೆಪಿಯವರು ಎಲ್ಲಿಗೆ ಕರೆದರೂ ಹೋಗುತ್ತೇನೆ’ ಎಂದು ದೇವೇಗೌಡ ಹೇಳಿದರು.

‘ಪ್ರಜ್ವಲ್ ರೇವಣ್ಣಗೆ ಮೋದಿ ಹಾಗೂ ಕುಮಾರಸ್ವಾಮಿ ಇಬ್ಬರೂ ಆಶೀರ್ವಾದ ಮಾಡಲಿದ್ದಾರೆ. ನಾನು ಕೂಡ ಆಶೀರ್ವಾದ ಮಾಡಿದ್ದೇನೆ. ಹಾಸನದಿಂದ ಅವರು ಸ್ಪರ್ಧಿಸುವ ಬಗ್ಗೆ ನಿಮಗೆ ಅನುಮಾನವೇಕೆ’ ಎಂದು ಗೌಡರು ಸುದ್ದಿಗಾರರನ್ನು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರ ಸಮಿತಿಯ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ತಿನ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಟಿ.ಎ. ಶರವಣ ಉಪಸ್ಥಿತರಿದ್ದರು.

ಯುವನಿಧಿ ಒಳ್ಳೆಯ ಯೋಜನೆ’

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದನೇ ಗ್ಯಾರಂಟಿ ‘ಯುವನಿಧಿ’ ಬಗ್ಗೆ ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ಯೋಜನೆ ಒಳ್ಳೆಯದು. ಯುವ ಜನರಿಗೆ ಹಣ ಕೊಡುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲ ಯುವಕರಿಗೂ ಕೊಡಲಿ. ಆ ಯುವಜನರು ಕೂಡ ರಾಮ ಮಂದರಕ್ಕೆ ಹೋಗಿ ಬರಲಿ’ ಎಂದರು. ‘ಜ. 22ರ ಬಳಿಕ ರಾಮಮಂದಿರಕ್ಕೆ ಹೋಗುತ್ತೇನೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಹೇಳಿಕೆಯನ್ನು ಸ್ವಾಗತಿಸುತ್ತೇನೆ. ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಪೂಜೆ ಮಾಡಲು ಹೇಳಿದ್ದಾರೆ. ಇದು ಒಳ್ಳೆಯ ವಿಚಾರ. ಮೃದು ಹಿಂದುತ್ವವೋ ಮತ್ತೊಂದೋ ಗೊತ್ತಿಲ್ಲ. ಹಿಂದುತ್ವವೋ ಇನ್ನೊಂದೋ ಗೊತ್ತಿಲ್ಲ’ ಎಂದು ಹೇಳಿದರು.

‘ಕಾವೇರಿ ಸಂಕಷ್ಟಕ್ಕೆ ಪ್ರಧಾನಿಯಿಂದಷ್ಟೇ ಪರಿಹಾರ’

‘ರಾಜ್ಯವು ಕಾವೇರಿ ವಿಷಯದಲ್ಲಿ ಎದುರಿಸುತ್ತಿರುವ ಜಲಸಂಕಷ್ಟವನ್ನು ಪರಿಹರಿಸುವ ಶಕ್ತಿ ಇರುವುದು ಪ್ರಧಾನಿ ಮೋದಿಗೆ ಮಾತ್ರ. ಈ ಚುನಾವಣೆ ಮುಗಿದ ನಂತರ ಮತ್ತೆ ಪ್ರಧಾನಿ ಆಗಲಿರುವ ಅವರೇ ಪರಿಹಾರ ಕಲ್ಪಿಸಲಿದ್ದಾರೆ’ ಎಂದು ದೇವೇಗೌಡ ಹೇಳಿದರು. ‘ಪ್ರತಿ ವರ್ಷ ತಮಿಳುನಾಡಿನವರು ಕಾವೇರಿ ಜಲ ನಿರ್ವಹಣಾ ಸಮಿತಿ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ಕರ್ನಾಟಕದಿಂದ ನೀರು ಕೊಡಿಸಿ ಎಂದು ಅರ್ಜಿ ಹಾಕುತ್ತಾರೆ. ನಮ್ಮ ಬಳಿ ನೀರು ಇಲ್ಲದೆ ಇದ್ದರೂ ನೀರು ಬಿಡಿ ಎಂದು ಪ್ರಾಧಿಕಾರದವರು ಹೇಳುತ್ತಾರೆ. ನಮ್ಮ ಅಧಿಕಾರಿಗಳು ಏನೇ ವಾದ ಮಾಡಿದರೂ ಪ್ರಯೋಜನ ಆಗುತ್ತಿಲ್ಲ’ ಎಂದರು. ‘ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಪ್ರತಿಯೊಂದು ಅಂಶವನ್ನು ನಾನು ಮೋದಿ ಅವರ ಗಮನಕ್ಕೆ ತಂದಿದ್ದೇನೆ. ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇನೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದರೆ ಮಾತ್ರ ಬೆಂಗಳೂರು ನಗರದ ನೀರಿನ ಬವಣೆ ತಪ್ಪಿಸಬಹುದು. ಇಲ್ಲದಿದ್ದರೆ ಬೆಂಗಳೂರು ನಗರ ಅತಿ ದೊಡ್ಡ ಜಲ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT