ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗವಿಕಲ ಚಿಣ್ಣರಿಗಾಗಿ ‘ವಿಶೇಷ’ ಉದ್ಯಾನ

ಬಾಲಭವನ ಆವರಣದಲ್ಲಿ ನಿರ್ಮಾಣ l ಮೈಂಡ್‌ ಟ್ರೀ ಫೌಂಡೇಷನ್‌ ನೆರವು
Last Updated 14 ಫೆಬ್ರುವರಿ 2022, 4:49 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲ ಮಕ್ಕಳು ಆಟವಾಡಿ ನಲಿಯಲು ಹಾಗೂ ಮನರಂಜನೆ ಚಟುವಟಿಕೆಗಳಲ್ಲಿ ತೊಡಗಲು ಕಬ್ಬನ್‌ ಉದ್ಯಾನದ ಬಾಲಭವನ ಆವರಣದಲ್ಲಿ ‘ವಿಶೇಷ ಮಕ್ಕಳ ಉದ್ಯಾನ’ವನ್ನು ನಿರ್ಮಿಸಲಾಗುತ್ತಿದೆ.

ಸಾಮಾನ್ಯ ಮಕ್ಕಳಂತೆ ವಿಶೇಷ ಮಕ್ಕಳೂ ಆಟೋಟ ಚಟುವಟಿಕೆಯಲ್ಲಿ ತೊಡಗಬೇಕು ಎನ್ನುವ ಉದ್ದೇಶದಿಂದ ವಿಶೇಷ ವಿನ್ಯಾಸದಲ್ಲಿ ನಿರ್ಮಾಣ ಮಾಡುತ್ತಿರುವ ಉದ್ಯಾನವಿದು. ಅಂಗವಿಕಲರಿಗಾಗಿಯೇ ನಿರ್ಮಾಣಗೊಳ್ಳುತ್ತಿರುವ ರಾಜ್ಯದ ಮೊದಲ ಉದ್ಯಾನ ಎಂಬ ಹೆಗ್ಗಳಿಕೆ ಇದರದು.

‘ಮೈಂಡ್‌ ಟ್ರೀ ಫೌಂಡೇಷನ್‌’ ಸಂಸ್ಥೆಯು ಈ ವಿಶೇಷ ಉದ್ಯಾನವನ್ನು ನಿರ್ಮಿಸಿ ಜವಾಹರ ಬಾಲಭವನ ಸೊಸೈಟಿಗೆ ಹಸ್ತಾಂತರಿಸುತ್ತಿದೆ. ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಡಿ ಉದ್ಯಾನವನ್ನು ನಿರ್ಮಿಸುತ್ತಿದೆ. ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿದ್ದು, 2022ರ ಮಾರ್ಚ್‌ ಒಳಗಾಗಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.

‘ಇದು ವಿಶೇಷ ಮಕ್ಕಳ ಸ್ನೇಹಿ ಉದ್ಯಾನ. ಅಂಗವಿಕಲ ಮಕ್ಕಳಿಗೆ ಮನರಂಜನೆ ನೀಡುವುದು ಹಾಗೂ ಇತರ ಮಕ್ಕಳಂತೆಯೇ ಆಡಲು ಅವರಿಗೂ ಸಮಾನ ಅವಕಾಶ ಒದಗಿಸುವುದು ಇದರ ಉದ್ದೇಶ. ಇಲ್ಲಿ ಅವರಿಗಾಗಿ ವಿಶೇಷ ಶೈಲಿಯ ಆಟಿಕೆಗಳನ್ನು ಅಳವಡಿಸಲಾಗುತ್ತಿದೆ. ಗಾಲಿ ಕುರ್ಚಿಯಲ್ಲಿ ಬರುವ ಮಕ್ಕಳು ಕೂಡಾ ಕುರ್ಚಿಯಲ್ಲಿ ಕುಳಿತುಕೊಂಡೇ ಆಟವಾಡಬಹುದು’ ಎಂದು ಜವಾಹರ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು 15 ಬಗೆಯ ಆಟಿಕೆಗಳು ಉದ್ಯಾನದಲ್ಲಿ ಇರಲಿವೆ.ಅಂಗವಿಕಲ ಮಕ್ಕಳು ಪೋಷಕರೊಂದಿಗೆ ಬಂದು ಉದ್ಯಾನದಲ್ಲಿ ಆಟವಾಡಬಹುದು. ಒಂದು ವೇಳೆ ಮಕ್ಕಳು ನೆಲಕ್ಕೆ ಬಿದ್ದರೂ ಯಾವುದೇ ಗಾಯವಾಗದಂತೆ ತಡೆಯಲು ಮೃದುವಾದ ನೆಲಹಾಸನ್ನು ವಿನ್ಯಾಸ ಮಾಡಲಾಗಿದೆ’ ಎಂದರು.

‘ವಿಶೇಷ ಮಕ್ಕಳು ಉದ್ಯಾನಕ್ಕೆ ಬಂದು ನಕ್ಕು ನಲಿಯಬಹುದು. ಕೂರಲು ಬಣ್ಣ ಬಣ್ಣದ ಆಸನಗಳ ವ್ಯವಸ್ಥೆ, ಆಟದ ಪರಿಕರಗಳು, ಅಲಂಕಾರಿಕ ಸಸ್ಯಗಳು, ಕಿರು ಸುರಂಗ ಸೇರಿದಂತೆ ರಂಗಿನ ಲೋಕವೇ ಅವರಿಗಾಗಿ ಸೃಷ್ಟಿಯಾಗುತ್ತಿದೆ. ಉದ್ಯಾನಕ್ಕೆ ಬರುವ ವಿಶೇಷ ಮಕ್ಕಳು ಇಲ್ಲಿ ಖುಷಿ ಪಡುವುದರಲ್ಲಿ ಅನುಮಾನವಿಲ್ಲ’ ಎಂದು ಹೇಳಿದರು.

‘ವಿಶೇಷ ಮಕ್ಕಳಿಗೆ ಉದ್ಯಾನಗಳ ಕೊರತೆ’

‘ವಿದೇಶಗಳಲ್ಲಿ ವಿಶೇಷ ಮಕ್ಕಳಿಗಾಗಿ ಪ್ರತ್ಯೇಕ ಉದ್ಯಾನಗಳನ್ನು ನಿರ್ಮಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಸಾಮಾನ್ಯ ಮಕ್ಕಳು ಆಟವಾಡಲು ಹಲವಾರು ಉದ್ಯಾನಗಳು ಮತ್ತು ಸ್ಥಳಗಳು ಲಭ್ಯ. ಆದರೆ ವಿಶೇಷ ಮಕ್ಕಳಿಗೆ ಅಂತಹ ಸೌಕರ್ಯಗಳಿಲ್ಲ. ವರದಿಯೊಂದರ ಪ್ರಕಾರ ಬೆಂಗಳೂರಿನಲ್ಲಿ 2 ಲಕ್ಷದಷ್ಟು ವಿಶೇಷ ಮಕ್ಕಳಿದ್ದಾರೆ. ಇದನ್ನು ಮನಗಂಡು ಅಂಗವಿಕಲರ ಉದ್ಯಾನ ನಿರ್ಮಿಸಲು ನಿರ್ಧರಿಸಲಾಯಿತು. ಬಹುಶಃ ದೇಶದಲ್ಲಿ ವಿಶೇಷ ಮಕ್ಕಳಿಗಾಗಿಯೇ ಸಜ್ಜುಗೊಳಿಸಲಾದ ಮೊದಲ ಉದ್ಯಾನವಿದು’ ಎಂದು ಮೈಂಡ್‌ ಟ್ರೀ ಫೌಂಡೇಷನ್ ಮುಖ್ಯಸ್ಥ ಅಬ್ರಾಹಂ ಮೋಸಸ್ ಹೇಳಿದರು.

‘ನಡೆಯಲು ಸಾಧ್ಯವಾಗದವರು, ಅಂಧರು ಸೇರಿದಂತೆ ಎಲ್ಲ ರೀತಿಯ ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಅನುಕೂಲವಾಗುವ ಆಟದ ಸೌಕರ್ಯಗಳನ್ನು ಉದ್ಯಾನದಲ್ಲಿ ಕಲ್ಪಿಸಲಾಗುತ್ತಿದೆ. ಆಟವಾಡಲು ಉಯ್ಯಾಲೆಗಳೂ ಇರಲಿವೆ. ವಿಶೇಷ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ ಆಟವಾಡಿಸಬೇಕು ಎಂದು ಪೋಷಕರಿಗೂ ಮಹದಾಸೆ ಇರುತ್ತದೆ. ಆದರೆ, ಎಲ್ಲಿಗೆ ಕರೆದೊಯ್ಯುವುದು ಎಂಬ ಚಿಂತೆಯಲ್ಲಿದ್ದವರಿಗೆ ಈ ಉದ್ಯಾನ ಸೂಕ್ತ ಸ್ಥಳವಾಗಲಿದೆ. ಮಕ್ಕಳೊಂದಿಗೆ ಪೋಷಕರೂ ಬಂದು ಉದ್ಯಾನದ ಸೊಬಗು ಸವಿಯಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT