ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಮಾಹಿತಿ ನೀಡದಿದ್ದರೆ ಹರಿಪ್ರಸಾದ್‌ ದೇಶದ್ರೋಹಿ ಆಗುತ್ತಾರೆ–ರವಿಕುಮಾರ್

Published 4 ಜನವರಿ 2024, 9:32 IST
Last Updated 4 ಜನವರಿ 2024, 9:32 IST
ಅಕ್ಷರ ಗಾತ್ರ

ಮಂಗಳೂರು: ‘ಗೋಧ್ರಾ ಮಾದರಿಯ ಹತ್ಯಾಕಾಂಡ ನಡೆಯಲಿದೆ ಎಂಬ ಬಗ್ಗೆ ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ಅವರಿಗೆ ಸ್ಪಷ್ಟ ಮಾಹಿತಿ ಇದ್ದರೆ ಅವರು ಸರ್ಕಾರಕ್ಕೆ ತಿಳಿಸಬೇಕು. ಇಲ್ಲದಿದ್ದರೆ ಅವರು ದೇಶದ್ರೋಹಿ ಆಗುತ್ತಾರೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಸಚೇತಕ ಎನ್‌.ರವಿಕುಮಾರ್‌ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬಿ.ಕೆ.ಹರಿಪ್ರಸಾದ್‌ ಅವರಿಗೆ ಓದುವ ಅಭ್ಯಾಸ ಇದ್ದರೆ, ಗೋಧ್ರಾ ಘಟನೆಯ ಕಾರಣಕರ್ತರು ಯಾರು, ಸೀಮೆ ಎಣ್ಣೆ ಎರಚಿ ರೈಲಿಗೆ ಬೆಂಕಿ ಕೊಟ್ಟಿದ್ದು ಯಾರು ತಿಳಿದುಕೊಳ್ಳಲಿ. ಅಲ್ಲಿ ಅಲ್ಪಸಂಖ್ಯಾತರು ಹಾಗೂ ಭಯೋತ್ಪಾದಕರು ರೈಲಿಗೆ ಬೆಂಕಿ ಹಚ್ಚಿದ್ದರು. ಅಂತಹದ್ದೇ ಘಟನೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯ ಗೊತ್ತಿದ್ದೂ ಸುಮ್ಮನೆ ಏಕೆ ಇದ್ದೀರಿ. ನೈತಿಕತೆ , ಜನರ ಕಾಳಜಿ ಇದ್ದರೆ, ಪ್ರಧಾನಿ ಅವರಿಗೆ, ಕೇಂದ್ರ ಗೃಹಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗೆ ಅಥವಾ ರಾಜ್ಯದ ಗೃಹಸಚಿವರಿಗೆ ತಿಳಿಸಿ. ದುರ್ಘಟನೆ ತಪ್ಪಿಸಬೇಕಾದುದು ನಿಮ್ಮ ನೈತಿಕ ಹೊಣೆ. ಇಲ್ಲದಿದ್ದರೆ ತಪ್ಪಾಗುತ್ತದೆ’ ಎಂದರು.

‘ಗೋಧ್ರಾ ಘಟನೆಯಂತಹ ಮುಠ್ಠಾಳ ಕೆಲಸ ಮಾಡುವ ಕಾರ್ಯಕರ್ತರು ಬಿಜೆಪಿಯಲ್ಲಿ ಯಾರೂ ಇರಲು ಸಾಧ್ಯವಿಲ್ಲ. ಇಂತಹ ಘಟನೆಗಳೇನಾದರೂ ನಡೆದರೆ, ಅದನ್ನು ದೇಶದ್ರೋಹಿಗಳಷ್ಟೇ ಮಾಡಲು ಸಾಧ್ಯ. ಅದನ್ನು ಅವರು ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಭಾರತ ಹಿಂದೂರಾಷ್ಟ್ರವಾಗುವುದು ಅಪಾಯಕಾರಿ’ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯತೀಂದ್ರ ಅವರು ಒಮ್ಮೆ ಭಾರತ ಪ್ರವಾಸ ಮಾಡಲಿ. ಉತ್ತರಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ಪಶ್ಚಿಮಬಂಗಾಳಕ್ಕೆ, ಈಶಾನ್ಯ ರಾಜ್ಯಗಳಿಗೆ, ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಿಗೆ ಭೇಟಿ ಕೊಡಲಿ. ಭಾರತವನ್ನು ಹಿಂದೂಸ್ತಾನ, ಹಿಂದೂರಾಷ್ಟ್ರ ಎಂದು ಕರೆಯುವವರು ಎಷ್ಟು ಜನ ಇದ್ದಾರೆ ಗೊತ್ತಾಗುತ್ತದೆ’ ಎಂದರು.

‘ಶೇ 80ಕ್ಕೂ ಹೆಚ್ಚು ಹಿಂದೂಗಳಿರುವ ಈ ದೇಶ ಹಿಂದೂರಾಷ್ಟ್ರವಲ್ಲವೇ. ಶೇ 20ಕ್ಕೂ ಕಡಿಮೆ ಜನಸಂಖ್ಯೆ ಹೊಂದಿರುವವ ಧರ್ಮದವರು ಇಲ್ಲಿ ಶಾಂತಿಯಿಂದ ಬದುಕುತ್ತಿದ್ದಾರೆ. ಅವರಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಇರುವಂತೆ ಏನಾದರೂ ಅಪಾಯ ಇದೆಯೇ? ಶೇ 80ಕ್ಕೂ ಹೆಚ್ಚು ಮುಸ್ಲೀಮರು ಇರುವ ದೇಶಗಳಲ್ಲಿ ಹಾಗೂ ರಾಜ್ಯಗಳಲ್ಲಿ ಹಿಂದೂಗಳ ಪರಿಸ್ಥಿತಿ ಏನಾಗಿದೆ ಎಂಬುವುದನ್ನು ಯತೀಂದ್ರ ಅಧ್ಯಯನ ಮಾಡಿದ್ದಾರೆಯೇ? ಬಾಯಿಗೆ ಬಂದಂತೆ ಹೇಳಿಕೆ ನೀಡುವ ಬದಲು ಅವರು ಸ್ವಲ್ಪ ಅಧ್ಯಯನ ಮಾಡಿ ಹೇಳಿಕೆ ನೀಡುವುದು ಒಳ್ಳೆಯದು’ ಎಂದರು.

’ಸಿದ್ದರಾಮಯ್ಯ ಅವರೇ ನನಗೆ ರಾಮ’ ಎಂಬ ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿಕುಮಾರ್‌, ‘ಶ್ರೀರಾಮ, ಶಿವ, ವಿಷ್ಣುವಿನ ಆದರ್ಶ ಎಂತಹದ್ದು. ಆಂಜನೇಯ ಹೆಸರು ಅವರಿಗೆ ಲಾಯಕ್ಕಲ್ಲ. ಅವರ ಆದರ್ಶ ನೋಡಿ ನನಗೆ ನಿದ್ದೆ ಬರುತ್ತಿದೆ. ಅವರ ಹೇಳಿಕೆಗಳಿಗೆ ನಯಾಪೈಸೆ ಕಿಮ್ಮತ್ತಿಲ್ಲ. ಯಾರೂ ಅದನ್ನು ಗೌರವಿಸುವುದಿಲ್ಲ’ ಎಂದರು.

‘ಕರ ಸೇವಕರನ್ನು ಬಂಧಿಸಿ, ರೈತರಿಗೆ ನಯಾಪೈಸೆ ನೀಡದ, ಅಲ್ಪಸಂಖ್ಯಾಂತರ ಅಭಿವೃದ್ಧಿಗೆ ₹ 10 ಸಾವಿರ ನೀಡಿರುವ ರಾಜ್ಯ ಸರ್ಕಾರ ನಾಡದ್ರೋಹಿ ಹಾಗೂ ದೇಶದ್ರೋಹಿ. ವಿನಾಶಕಾಲದಲ್ಲಿ ವಿಪರೀತ ಬುದ್ಧಿ ಎಂಬಂತೆ ಸರ್ಕಾರವು ಆಡಳಿತ ನಡೆಸುತ್ತಿದೆ. 31 ವರ್ಷಗಳಷ್ಟು ಹಳೆಯ ಘಟನೆ ಆಧರಿಸಿ ಶ್ರೀಕಾಂತ ಪೂಜಾರಿ ಬಂಧನವನ್ನು ಬಿಜೆಪಿ ಖಂಡಿಸಲಿದೆ. ಅವರ ಬಿಡುಗಡೆಗೆ 40 ಗಂಟೆ ಗಡುವು ನೀಡಿದ್ದೇವೆ. ಅಷ್ಟರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT