ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರ ಹೆಗಡೆ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಗೆ ಹೈಕೋರ್ಟ್‌ ತಡೆ

Published 15 ಮಾರ್ಚ್ 2024, 15:54 IST
Last Updated 15 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಮುಂಡಗೋಡು ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ.

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅನಂತ ಕುಮಾರ ಹೆಗಡೆ ಸಲ್ಲಿಸಿದ್ದ ಅರ್ಜಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ’ದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಶುಕ್ರವಾರ ವಿಚಾರಣೆ ನಡೆಸಿದರು.

ಅರ್ಜಿದಾರರ ಪರ ವಕೀಲ ಎಚ್‌.ಪವನಚಂದ್ರ ಶೆಟ್ಟಿ ವಾದ ಆಲಿಸಿದ ನ್ಯಾಯಮೂರ್ತಿಗಳು, ಪ್ರತಿವಾದಿಗಳಾದ ಮುಂಡಗೋಡು ಠಾಣಾ ಪೊಲೀಸರು ಮತ್ತು ದೂರುದಾರ ಕಾನ್‌ಸ್ಟೆಬಲ್‌ ಗಣಪತಿ ಬಸವಂತಪ್ಪ ಹುನ್ನಳ್ಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದರು.

ಪ್ರಕರಣವೇನು?: ಮುಂಡಗೋಡು ತಾಲ್ಲೂಕಿನ ಪಾಳಾ ಮತ್ತು ಇಂದೂರ ಗ್ರಾಮದಲ್ಲಿ 2024ರ ಫೆಬ್ರುವರಿ 23ರಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆದಿತ್ತು. ಇದರಲ್ಲಿ ಭಾಗವಹಿಸಿದ್ದ ಅನಂತ ಕುಮಾರ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ‘ಸಿದ್ರಾಮುಲ್ಲಾ ಖಾನ್‌ ಅತ್ಯಂತ ಹೇಸಿಗೆ ಬರುವ ರೀತಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವಲ್ಲಿ ನಿರತರಾಗಿದ್ದಾರೆ. ಇಂತಹ ಸರ್ಕಾರವನ್ನು ನಾವೆಲ್ಲೂ ನೋಡಿಲ್ಲ. ಇವರ ಕೈಯಲ್ಲಿ ಅಧಿಕಾರ ಕೊಟ್ಟರೆ ನಮ್ಮನ್ನು ಮಾರಾಟ ಮಾಡುತ್ತಾರೆ. ಹಿಂದೂಗಳ ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು, ಚರ್ಚ್‌, ಮಸಿದಿಗೆ ಕೊಡುತ್ತಾರೆ. ಹಿಂದೂಗಳ ದೇವಸ್ಥಾನದಲ್ಲಿ ದೇವರಿಲ್ಲವೇ’ ಎಂದು ‍ಪ್ರಶ್ನಿಸಿದ್ದರು.

‘ಅನಂತ ಕುಮಾರ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ತನ್ಮೂಲಕ ಸಭೆಯಲ್ಲಿ ಹಾಜರಿದ್ದ ಯುವಕರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಶಾಂತಿ-ಸೌರ್ಹದತೆ ಕದಡುವ, ಜಾತಿ, ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ  ಮಾತುಗಳನ್ನಾಡಿದ್ದಾರೆ’ ಎಂದು ಆರೋಪಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪ್ರಧಾನ ಜಿಲ್ಲಾ (ಕಿರಿಯ ಶ್ರೇಣಿ) ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

ಮತ್ತೊಂದು ಪ್ರಕರಣ: ‘ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನಲ್ಲಿ 2024ರ ಜನವರಿ 21ರಂದು ಮತ್ತು 30ರಂದು ಅನಧಿಕೃತವಾಗಿ ಧ್ವಜದ ಕಟ್ಟೆ ಕಟ್ಟಿದ ಮತ್ತು ಆ ಕಟ್ಟೆಗೆ ವೀರ ಸಾವರ್ಕರ್‌ ಎಂಬ ನಾಮಫಲಕ ಅಳವಡಿಸಿ, ಧ್ವಜಸ್ತಂಭಕ್ಕೆ ಭಗವಾ ಧ್ವಜ ಅಳವಡಿಸಲಾಗಿದೆ’ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತ ಕುಮಾರ ಹೆಗಡೆ ವಿರುದ್ಧ ಭಟ್ಕಳ ಗ್ರಾಮಾಂತರ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ನ್ಯಾಯಪೀಠ ಶುಕ್ರವಾರ ತಡೆ ನೀಡಿದೆ.

ಪ್ರತಿವಾದಿಗಳಾದ ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ದೂರುದಾರ ಹೆಬ್ಳೆ ಪಂಚಾಯಿತಿ ಪಿಡಿಒ ಮಂಜುನಾಥ ಎಂ.ಗೋಂಡ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ. ಹೆಬ್ಳೆ ಪಂಚಾಯಿತಿಯಿಂದ ಅನುಮತಿ ಪಡೆಯದೇ ಅನಧಿಕೃತವಾಗಿ ಧ್ವಜ ಕಟ್ಟೆ ನಿರ್ಮಿಸಲಾಗಿದೆ ಎಂದು ಪ್ರಕರಣದಲ್ಲಿ ಅನಂತ ಕುಮಾರ ಹೆಗಡೆ ಅವರನ್ನು 16ನೇ ಆರೋಪಿಯನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT