ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಆರಂಭಕ್ಕೆ ಆತುರ ಬೇಡ: ಕುಮಾರಸ್ವಾಮಿ

Last Updated 6 ನವೆಂಬರ್ 2020, 13:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಆತುರದ ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಮುದಾಯದ ಮಾರಣಹೋಮಕ್ಕೆ ನಾಂದಿ ಹಾಡಿದಂತಾಗುತ್ತದೆ.. ಹುಷಾರ್...!! ಇಂತಹ ಯಾವುದೇ ನಿರ್ಧಾರ ತಕ್ಷಣ ಕೈಗೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಶಾಲಾ-ಕಾಲೇಜುಗಳ ಆರಂಭಕ್ಕೆ ಶಿಕ್ಷಕ ಸಮುದಾಯ, ಶಾಲಾಭಿವೃದ್ಧಿ ಉಸ್ತುವಾರಿ ಸಮಿತಿ (ಎಸ್‍ಡಿಎಂಸಿ) ಹಾಗೂ ಪೋಷಕರ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಸಂಗ್ರಹಿಸುತ್ತಿರುವುದೇನೋ ಸರಿ. ಆದರೆ, ಅತಿರೇಕದ ನಿರ್ಧಾರ ಅನಾಹುತಕ್ಕೆ ದಾರಿಯಾಗುತ್ತದೆ ಎಚ್ಚರ ಎಂದಿದ್ದಾರೆ.

ನೆರೆಯ ಆಂಧ್ರಪ್ರದೇಶದಲ್ಲಿ ಶಾಲೆ ಆರಂಭವಾದ ಮೂರೇ ದಿನದಲ್ಲಿ 260ಕ್ಕೂ ಹೆಚ್ಚು ಮಕ್ಕಳು ಹಾಗೂ 160ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿರುವ ವರದಿ ತೀವ್ರ ಆತಂಕಕಾರಿ ಬೆಳವಣಿಗೆ. ಇದು ರಾಜ್ಯದಲ್ಲಿ ಪೋಷಕರ ಜಂಘಾಬಲವನ್ನೇ ಉಡುಗಿಸಿದೆ. ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಲಿ. ಆದರೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯದ ಪ್ರಾಣದೊಂದಿಗೆ ಚೆಲ್ಲಾಟವಾಡುವುದನ್ನು ಯಾವುದೇ ಕಾರಣಕ್ಕೂ ನಾಗರಿಕ ಸಮಾಜ ಒಪ್ಪದು. ಈ ಹಿಂದೆಯೇ ಸರ್ಕಾರಕ್ಕೆ ಶಾಲಾ-ಕಾಲೇಜುಗಳನ್ನು ಆರಂಭಿಸುವುದು ಬೇಡ ಎಂದು ಸಲಹೆ ನೀಡಿದ್ದೆ ಎಂದು ತಿಳಿಸಿದ್ದಾರೆ.

ಮದ್ದಿಲ್ಲದ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯಲೇಬೇಕು. ಇಲ್ಲದಿದ್ದರೆ ಸರ್ಕಾರವೇ ಮುಂದಿನ ಎಲ್ಲಾ ಅನಾಹುತಗಳ ಹೊಣೆ ಹೊರಬೇಕಾಗುತ್ತದೆ. ಶಾಲಾ-ಕಾಲೇಜು ಆರಂಭಿಸುವ ವಿಚಾರದಲ್ಲಿ ಮಾತ್ರ ಸರ್ಕಾರ ಮೈಯೆಲ್ಲ ಕಣ್ಣಾಗಿರಬೇಕು. ಈಗ ಶಾಲಾ-ಕಾಲೇಜು ಆರಂಭಿಸುವ ಉಮೇದಿಯಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಮತ್ತೊಮ್ಮೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT