ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ: ಸಂಘರ್ಷ ಹಾದಿ ಬಿಡಲು ನಿರ್ಧಾರ

ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ: ಸಿ.ಎಂ.ಗೆ ದೇವೇಗೌಡ ಸಲಹೆ
Last Updated 24 ಜೂನ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಂಘರ್ಷ ಕೈಬಿಟ್ಟು, ಸೌಹಾರ್ದದ ಹಾದಿ ತುಳಿಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ವಿಷಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರದ ವಿರುದ್ಧ ಸಂಘರ್ಷದ ಮಾತುಗಳನ್ನು ಆಡಿದ್ದರು. ಆದರೆ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಕುಮಾರಸ್ವಾಮಿ ಅವರನ್ನು ಶನಿವಾರ ರಾತ್ರಿ ಕರೆಸಿಕೊಂಡು ಕೇಂದ್ರದ ಜತೆ ಸಂಘರ್ಷದ ಹಾದಿ ಬಿಟ್ಟು, ನ್ಯಾಯಾಲಯ ಆದೇಶದ ವ್ಯಾಪ್ತಿಯಲ್ಲಿ ಸೌಹಾರ್ದದ ಹಾದಿ ಹಿಡಿಯಲು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ100 ವರ್ಷಗಳ ಮಾಹಿತಿಯನ್ನು ಒಳಗೊಂಡ ಹೊತ್ತಗೆ ಸಿದ್ಧಪಡಿಸಿಕೊಳ್ಳಲು ಅವರು ಮುಖ್ಯಮಂತ್ರಿಗೆ ಸಲಹೆ ನೀಡಿದರು.

ಈ ಹಿನ್ನೆಲೆಯಲ್ಲಿ ಭಾನುವಾರ
ಬೆಳಿಗ್ಗೆ ಕುಮಾರಸ್ವಾಮಿ ಅವರು ಅಡ್ವೊಕೇಟ್‌ ಜನರಲ್‌ ಉದಯ ಹೊಳ್ಳ, ನಿವೃತ್ತ ಎಂಜಿನಿಯರ್‌ ಹಾಗೂ ನೀರಾವರಿ ತಜ್ಞ ವೆಂಕಟರಾಮ್ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದರು.

‘ರಾಜ್ಯದ ಕಾವೇರಿ ಕಣಿವೆಯಲ್ಲಿನ ನೈಜ ಸ್ಥಿತಿ ಮತ್ತು ನಿರಂತರವಾಗಿ ಆಗುತ್ತಿರುವ ಅನ್ಯಾಯದ ಬಗ್ಗೆ ಅಂಕಿ– ಅಂಶಗಳು ಮತ್ತು ಮಾಹಿತಿಯನ್ನು ಒಳಗೊಂಡ ಹೊತ್ತಗೆ ಸಿದ್ಧಪಡಿಸಬೇಕು’ ಎಂದು ಸೂಚನೆ ನೀಡಿದರು.

ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಒಂದೆರಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಲಸಂಪನ್ಮೂಲ
ಸಚಿವ ನಿತಿನ್ ಗಡ್ಕರಿ ಅವರಿಗೆ ಕುಮಾರಸ್ವಾಮಿ ಪತ್ರ ಬರೆಯಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಮುಂದಿಟ್ಟುಕೊಂಡು, ರಾಜ್ಯದ ಸ್ಥಿತಿಗತಿಯನ್ನು ಕೇಂದ್ರಕ್ಕೆ ಮನ
ವರಿಕೆ ಮಾಡಿಕೊಡಬೇಕು. ನಮ್ಮಿಂದ ಏನೂ ಆಗುವುದಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಅಗತ್ಯವಿಲ್ಲ’ ಎಂದು ದೇವೇಗೌಡರು ಸಲಹೆ ನೀಡಿದರು.

‘ತಜ್ಞರು ಸಿದ್ಧಪಡಿಸುವ ಹೊತ್ತಗೆಯನ್ನು ಕರ್ನಾಟಕ ಮತ್ತು ತಮಿಳುನಾಡಿನ ಎಲ್ಲ ಸಂಸದರು ಮತ್ತು ಕೇಂದ್ರ ಸಚಿವರಿಗೆ ನೀಡಬೇಕು. ಇದರಿಂದ ವಾಸ್ತವದ ಅರಿವು ಮೂಡಿಸುವುದರ ಜತೆಗೆ, ಕೇಂದ್ರದ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಸತತವಾಗಿ ಮಳೆಯ ಕೊರತೆಯಾಗಿದೆ. ನಗರೀಕರಣದಿಂದಾಗಿ ನೀರಿನ ಅವಶ್ಯಕತೆಯೂ ಹೆಚ್ಚಾಗಿದೆ. ಇನ್ನೊಂದು ಕಡೆ ನದಿಯಲ್ಲಿ ನೀರಿನ ಹರಿವೂ ತಗ್ಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಕಡಿಮೆಯಾಗಿದೆ. ಕುಡಿಯುವುದಕ್ಕೆ ಬಿಟ್ಟು ಬೆಳೆ ಬೆಳೆಯುವುದಕ್ಕೂ ರೈತರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲಎಂಬುದನ್ನು ಕೇಂದ್ರದ ಗಮನಕ್ಕೆ ತರಬೇಕು’ ಎಂದು ದೇವೇಗೌಡರು ತಿಳಿಸಿದರು.

‘ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆರೆಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನದಿನೀರು ಸಂಗ್ರಹಿಸಲಾಗುತ್ತಿದೆ. 2007 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಎಚ್ಚರಿಕೆ ವಹಿಸಿದ್ದರಿಂದ ಅಂತಿಮ ತೀರ್ಪಿನಲ್ಲಿ 11 ಟಿಎಂಸಿ ಅಡಿಗಳಷ್ಟು ಕುಡಿಯುವ ನೀರು ಸಿಕ್ಕಿದೆ. ಈಗ ನಾವು ಕೇಂದ್ರಕ್ಕೆ ಮನವರಿಕೆ ಮಾಡಿ, ಒಂದಷ್ಟು ಅನುಕೂಲ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಗೌಡರು ಕಿವಿಮಾತು ಹೇಳಿದ್ದಾರೆ.

ಬೆಂಗಳೂರಿನ ಜನಸಂಖ್ಯೆ 1 ಕೋಟಿ ಮೀರಿದೆ. ಮೈಸೂರು, ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳಿಗೂ ಕಾವೇರಿಯಿಂದಲೇ ಕುಡಿಯುವ ನೀರು ಕೊಡಬೇಕಾಗಿದೆ. ಕೃಷಿಗೂ ನೀರು ಒದಗಿಸಬೇಕು. ಕಳೆದ 10 ವರ್ಷಗಳಿಂದೀಚೆಗೆ ನೀರಿನ ಲಭ್ಯತೆ ಶೇ 50 ರಷ್ಟು ಕಡಿಮೆ ಆಗಿದೆ ಎಂಬುದನ್ನು ಕೇಂದ್ರಕ್ಕೆ ಮನವರಿಕೆ ಮಾಡಬೇಕು ಎಂದೂ ಕುಮಾರಸ್ವಾಮಿ ತಜ್ಞರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಇಬ್ಬರು ಪ್ರತಿನಿಧಿಗಳನ್ನು ಕಳಿಸುತ್ತೇವೆ’

ಶ್ರವಣ ಬೆಳಗೊಳ: ಕರ್ನಾಟಕದ ಪ್ರತಿನಿಧಿಗಳು ಇಲ್ಲದೆಯೂ ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಸದ ಎಚ್.ಡಿ.ದೇವೇಗೌಡ, ಇದನ್ನು ಪ್ರತಿಭಟಿಸಿ ಷರತ್ತು ಪತ್ರದ ಜೊತೆಗೆ ರಾಜ್ಯದ ಇಬ್ಬರು ಪ್ರತಿನಿಧಿಗಳನ್ನು ಶೀಘ್ರವೇ ಕಳಿಸಲಾಗುವುದು ಎಂದರು.

‘ಸಮಿತಿ ರಚನೆ ನಂತರ ಪ್ರತಿ 10 ದಿನಕ್ಕೊಮ್ಮೆ ನೀರಿನ ಪ್ರಮಾಣ ಅಳತೆ ಮಾಡುತ್ತಾರೆ. ಬೆಳೆ ಮತ್ತು ಇತರೆ ಬಳಕೆ ನೀರನ್ನೂ ಅಳತೆ ಮಾಡಲಾಗುತ್ತದೆ. ಇಂಥ ನಿರ್ಬಂಧಗಳಿಗೆ ನನ್ನ ವಿರೋಧವಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT