ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ ಕುಲಕರ್ಣಿ ವಿರುದ್ಧ ಬಲವಂತದ ಕ್ರಮ ಬೇಡ: ಆದೇಶ ವಿಸ್ತರಣೆ

Published 5 ಜನವರಿ 2024, 16:05 IST
Last Updated 5 ಜನವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆವರೆಗೂ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಸಿಬಿಐಗೆ ನಿರ್ದೇಶನವನ್ನು ಹೈಕೋರ್ಟ್‌ ವಿಸ್ತರಿಸಿ ಆದೇಶಿಸಿದೆ.

‘ನನ್ನ ವಿರುದ್ಧದ ವಿಚಾರಣಾ ನ್ಯಾಯಾಲಯದಲ್ಲಿನ ನ್ಯಾಯ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು‘ ಎಂದು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಹಾಜರಾಗಿದ್ದ ವಕೀಲ ಸಿ.ಎಚ್‌.ಹನುಮಂತರಾಯ ಅವರು, ’ಈ ಪ್ರಕರಣದ ನ್ಯಾಯಿಕ ವಿಚಾರಣೆಯಲ್ಲಿ ಸಿಬಿಐ ಪರವಾದ ವಿಶೇಷ ಪ್ರಾಸಿಕ್ಯೂಟರ್‌ ಆಗಿ ಹಾಜರಾಗಲು ಗಂಗಾಧರ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ‘ ಎಂದು ತಿಳಿಸಿದರು. ಅಂತೆಯೇ, ಈ ಸಂಬಂಧ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಇದಕ್ಕೆ ಸಿಬಿಐ ಪರ ಹಾಜರಿದ್ದ ವಕೀಲ ಪಿ.ಪ್ರಸನ್ನ ಕುಮಾರ್, ’ನನಗೆ ಈ ವಿಷಯ ಈಗಲೇ ತಿಳಿದದ್ದು. ಹಾಗಾಗಿ, ಗಂಗಾಧರ ಶೆಟ್ಟಿ ಅವರನ್ನು ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿರುವ ಬಗ್ಗೆ ಸ್ಪಷ್ಟನೆ ಪಡೆಯಲು ಮತ್ತು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು‘ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ,  ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಸಿಬಿಐಗೆ ಈ ಮೊದಲು ನೀಡಿದ್ದ ನಿರ್ದೇಶನವನ್ನು ವಿಸ್ತರಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ಯೋಗೀಶ್‌ಗೌಡ ಗೌಡರ್ ಕೊಲೆ 2016ರ ಜೂನ್‌ನಲ್ಲಿ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ವಿನಯ ಕುಲಕರ್ಣಿ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಬತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT