ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಖಾತೆ ಹ್ಯಾಕಿಂಗ್‌ ಜಾಲ: ಹೈಕೋರ್ಟ್‌ ಶಂಕೆ

Published 27 ಜೂನ್ 2023, 15:28 IST
Last Updated 27 ಜೂನ್ 2023, 15:28 IST
ಅಕ್ಷರ ಗಾತ್ರ

ಬೆಂಗಳೂರು: ’ಫೇಸ್‌ಬುಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳನ್ನು ಬಿತ್ತರಿಸುವ ಪ್ರಕರಣಗಳ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವಂತಿದೆ‘ ಎಂದು ಹೈಕೋರ್ಟ್‌ ಬಲವಾದ ಶಂಕೆ ವ್ಯಕ್ತಪಡಿಸಿದೆ.

’ಧರ್ಮನಿಂದನೆ ಆರೋಪದಡಿ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ನಿವಾಸಿ ಜನಾರ್ದನ ಸಾಲಿಯಾನ ಶೈಲೇಶ್‌ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈತನಕ ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸಬೇಕು‘ ಎಂದು ನಿರ್ದೇಶನ ನೀಡಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ’ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅಭಿಪ್ರಾಯ, ಟೀಕೆ–ಟಿಪ್ಪಣಿ ಬಿತ್ತರಿಸುವಂತಹ ಆರೋಪಗಳ ಬಗ್ಗೆ ಸೈಬರ್‌ ಪೊಲೀಸರು ಹೆಚ್ಚಿನ ನಿಗಾ ವಹಿಸಿ ಅಪರಾಧಿಗಳನ್ನು ಪತ್ತೆ ಹಚ್ಚಬೇಕು‘ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು.

ಮಂಗಳೂರಿನ ಬಿಕರ್ನಕಟ್ಟೆ ನಿವಾಸಿಯಾದ ಜನಾರ್ದನ ಸಾಲಿಯಾನ ಶೈಲೇಶ್ ಕುಮಾರ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠವು ಮಂಗಳವಾರ ವಿಚಾರಣೆ  ನಡೆಸಿತು. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲ ಮಧುಕರ ದೇಶಪಾಂಡೆ, ’ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಯೊಂದಿಗೆ ವಿಸ್ತೃತ ಪತ್ರ ವ್ಯವಹಾರ ನಡೆಸಲಾಗಿದೆ‘ ಎಂದರು.

ಇದಕ್ಕೆ ನ್ಯಾಯಪೀಠವು, ’ಕೇವಲ ಪತ್ರ ವ್ಯವಹಾರ ನಡೆಸಿದರೆ ಸಾಲದು. ನಮ್ಮ ಪೊಲೀಸರು ಸ್ಕಾಟ್ಲೆಂಡ್‌ ಮತ್ತು ಮೊಸಾದ್‌ ಪೊಲೀಸರ ಚಾಣಾಕ್ಷಣತೆ ಹಾಗೂ ಕೌಶಲವನ್ನು ಪ್ರದರ್ಶಿಸಬೇಕು. ಇದು ವಿದೇಶಿ ನೆಲದಲ್ಲಿ ಭಾರತೀಯ ಪ್ರಜೆಯೊಬ್ಬರ ಜೀವ ಅಪಾಯದಲ್ಲಿದೆ ಎಂಬುದಕ್ಕೆ ಉದಾಹರಣೆ. ಹೀಗಾದರೆ ನಾಳೆ ವಿದೇಶಗಳಲ್ಲಿ ಇರುವ ಭಾರತೀಯರ ಪರಿಸ್ಥಿತಿಯೇನು‘ ಎಂದು ಪ್ರಶ್ನಿಸಿತು.

‘ಸೌದಿ ಅರೇಬಿಯಾ ಭಾರತದ ನೆಚ್ಚಿನ ವಿದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹೀಗಿರುವಾಗ ಮುಗ್ಧ ಪ್ರಜೆ ಜನಾರ್ದನ ಸಾಲಿಯಾನ ಪ್ರಕರಣವನ್ನು ಕುಲಭೂಷಣ ಪ್ರಕರಣದಲ್ಲಿ ಭಾರತ ತೆಗೆದುಕೊಂಡ ನಿಲುವಿನ ರೀತಿಯಲ್ಲೇ ಪರಿಗಣಿಸಿ ರಾಜತಾಂತ್ರಿಕ ವ್ಯವಹಾರ ನಡೆಯಬೇಕಿದೆ. ಇಂತಹ ಪ್ರಕರಣಗಳಲ್ಲಿ ವಿಯೆನ್ನಾ ಒಪ್ಪಂದದ ಅನುಸಾರ ನಮ್ಮ ವ್ಯವಹಾರಗಳು ಜರುಗಬೇಕು. ನಮ್ಮ ದೇಶದ ಪ್ರಜೆಯೊಬ್ಬ ವಿದೇಶದಲ್ಲಿ ಅಪಾಯದಲ್ಲಿ ಸಿಲುಕಿದ್ದಾನೆ ಎಂದಾಗ ರಾಜ್ಯದ ಅತ್ಯುನ್ನತ ಕೋರ್ಟ್‌ ಎನಿಸಿದ ಹೈಕೋರ್ಟ್‌ ಆ ಕುರಿತು ಕಾಳಜಿ ವಹಿಸಿದೆ ಎಂಬುದು ವಿದೇಶೀಯರ ಗಮನಕ್ಕೂ ಬರಬೇಕು. ಹಾಗಾಗಿ, ಜನಾರ್ದನ ಅವರ ಜೀವಕ್ಕೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳಲು ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿ‘ ಎಂದು ಕೇಂದ್ರಕ್ಕೆ ನಿರ್ದೇಶಿಸಿತು.

‘ಶೈಲೇಶ್‌ಗೆ ವಿಧಿಸಿರುವ ಶಿಕ್ಷೆಯ ಕುರಿತಾದ ಮನವಿ ರಿಯಾದ್‌ನಲ್ಲಿರುವ ಮರುಪರಿಶೀಲನಾ ಪೀಠದ ಮುಂದೆ ಹೋಗಲಿದೆ, ಸೈಬರ್ ಅಪರಾಧ ವಿಭಾಗದ ಪೊಲೀಸರು ತನಿಖಾ ವರದಿಯನ್ನು ಯುದ್ದೋಪಾದಿಯಲ್ಲಿ ಸಿದ್ಧಪಡಿಸಿ ಅದನ್ನು ಮರುಪರಿಶೀಲನಾ ಪೀಠದ ಮುಂದೆ ಮಂಡಿಸಿದರೆ, ಬಂಧನದಲ್ಲಿರುವ ಭಾರತೀಯ ಪ್ರಜೆಯ ಮುಗ್ಧತೆಯನ್ನು ಒರೆಗೆ ಹಚ್ಚಿದಂತಾಗುತ್ತದೆ. ಆ ಮೂಲಕ ಅವರು ಬಿಡುಗಡೆ ಹೊಂದಬಹುದು‘ ಎಂಬ ಆಶಾಭಾವನೆಯನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.

ಇದೇ ವೇಳೆ ರಾಜ್ಯ ಸರ್ಕಾರದ ಪರ ವಕೀಲೆ ಶ್ವೇತಾ ಕೃಷ್ಣಪ್ಪ, ’ಫೇಸ್‌ ಬುಕ್‌ ಖಾತೆ ಹ್ಯಾಕ್‌ ಆಗಿರುವುದರ ಬಗ್ಗೆ ಬೆಂಗಳೂರಿನ ಸೈಬರ್ ಅಪರಾಧ ವಿಭಾಗದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ‘ ಎಂದು ವಿವರ ನೀಡಿದರು. ಸೈಬರ್‌ ಅಪರಾಧ ವಿಭಾಗದ ವೃತ್ತ ನಿರೀಕ್ಷಕ ಪಿ.ಎಂ.ಸತೀಶ್‌ ಹಾಜರಿದ್ದರು. ಪ್ರಕರಣವನ್ನು ಜುಲೈ 17ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?:

ಮಂಗಳೂರಿನ ಬಿಕರ್ನಕಟ್ಟೆಯ 45 ವರ್ಷದ ಜನಾರ್ದನ ಸಾಲಿಯಾನ ಶೈಲೇಶ್ ಕುಮಾರ್ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್‌ ಕುಬೆರ್ ಎಂಬಲ್ಲಿ ಉದ್ಯೋಗಿಯಾಗಿದ್ದಾರೆ. ಪತ್ನಿ ಮತ್ತು ಮಕ್ಕಳು ಬಿಕರ್ನಕಟ್ಟೆಯಲ್ಲಿ ವಾಸ ಮಾಡುತ್ತಿದ್ದಾರೆ. 

ಶೈಲೇಶ್ 2019ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್‌ಆರ್‌ಸಿ) ಬೆಂಬಲಿಸಿ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದರಿಂದ ಅವರಿಗೆ ಅನಾಮಿಕರಿಂದ ಬೆದರಿಕೆ ಬಂದಿತ್ತು. ಹಾಗಾಗಿ, ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ರದ್ದುಪಡಿಸಿದ್ದರು.

ಏತನ್ಮಧ್ಯೆ ಶೈಲೇಶ್ ಕುಮಾರ್ ಹೆಸರಿನಲ್ಲಿ 2020ರ ಫೆಬ್ರುವರಿಯಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಅವರ ಧರ್ಮದ ಹೆಸರಿನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದು ತಮ್ಮ ಗಮನಕ್ಕೆ ಬಂದಕೂಡಲೇ ಶೈಲೇಶ್‌ ತಮ್ಮ ಸ್ನೇಹಿತರಿಗೆ ಮತ್ತು ಮಂಗಳೂರಿನ ಸಂಬಂಧಿಕರಿಗೆ ತಿಳಿಸಿದ್ದರು.

ಇದೇ ವೇಳೆ ಸೌದಿ ಪೊಲೀಸರು ಶೈಲೇಶ್‌ ಅವರನ್ನು ಬಂಧಿಸಿದ್ದರು. ಈ ಕುರಿತಂತೆ ಮಂಗಳೂರಿನಲ್ಲಿ ಪತ್ನಿ ಕವಿತಾ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು, ಮೆಟಾ–ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು, ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದವರ ಮಾಹಿತಿ ನೀಡುವಂತೆ ಕೋರಿದ್ದರು. ಅಂತೆಯೇ,  ‘ನಿರಪರಾಧಿಯಾದ ನನ್ನ ಗಂಡನನ್ನು ಸೌದಿ ಜೈಲಿನಿಂದ ಬಿಡಿಸಲು ಕ್ರಮ ಜರುಗಿಸಿ‘ ಎಂದು ಕೋರಿ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು. ಈ ಮನವಿ ಫಲ ನೀಡದ ಕಾರಣ ಅವರು, ‘ಪೊಲೀಸರು ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ‘ ಎಂದು ಆಕ್ಷೇಪಿಸಿ 2021ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT