ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಜಿ ಶಾಸಕ ಲಿಂಗೇಶ್ ಸೇರಿ 9 ಜನರ ವಿರುದ್ಧದ FIR ರದ್ದುಪಡಿಸಲು ಹೈಕೋರ್ಟ್ ನಕಾರ

ಬಗರ್‌ ಹುಕುಂ ಸಾಗುವಳಿ ಭೂ ಮಂಜೂರಾತಿ ಅಕ್ರಮ ಆರೋಪ
Published : 16 ಸೆಪ್ಟೆಂಬರ್ 2024, 15:24 IST
Last Updated : 16 ಸೆಪ್ಟೆಂಬರ್ 2024, 15:24 IST
ಫಾಲೋ ಮಾಡಿ
Comments

ಬೆಂಗಳೂರು: ಬಗರ್‌ ಹುಕುಂ ಸಾಗುವಳಿ ಭೂ ಮಂಜೂರಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ನ ಮಾಜಿ ಶಾಸಕ ಕೆ.ಎಸ್‌.ಲಿಂಗೇಶ್‌ ಸೇರಿದಂತೆ 9 ಜನರ ವಿರುದ್ಧ ಹಾಸನ ಜಿಲ್ಲೆಯ ಬೇಲೂರು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

‘ನಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಬಗರ್‌ ಹುಕುಂ ಸಾಗುವಳಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಸ್‌‌.ಲಿಂಗೇಶ್‌, ಸಮಿತಿಯ‌ ಮಾಜಿ ಸದಸ್ಯರಾದ ಜಿ.ಕೆ.ಕುಮಾರ್‌, ಶೈಲಾ ಮೋಹನ್‌, ಟಿ.ಆರ್‌. ರಮೇಶ್‌, ಪರ್ವತಗೌಡ, ಎಂ.ಆರ್‌.ಚೇತನಾ, ಈಶ್ವರ್‌ ಪ್ರಸಾದ್‌, ಎಸ್‌.ಎನ್‌‌ ಲಿಂಗೇಶ್‌ ಮತ್ತು ರಂಗನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಪ್ರಕರಣವೇನು?: ‘ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಜಮೀನನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂಬುದು ಆರೋಪ.

‘ಬೇಲೂರು ತಾಲ್ಲೂಕು ಬಗರ್‌ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದ ಮೊದಲ ಆರೋಪಿ ಮಾಜಿ ಶಾಸಕ ಲಿಂಗೇಶ್‌ 750 ಎಕರೆಗಿಂತ ಹೆಚ್ಚಿನ ಸರ್ಕಾರಿ ಜಮೀನಿ‌ನ ಅನುದಾನವನ್ನು ಅನುಮೋದಿಸಿದ್ದಾರೆ. ಆರೋಪಿಗಳೆಲ್ಲರೂ ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಲು ಸಹಕಾರ ‌ನೀಡಿದ್ದ, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ನಡೆಸಿದ್ದಾರೆ. ಮಾಜಿ ಶಾಸಕ ವೈ.ಎನ್‌‌.ರುದ್ರೇಶ್‌ ಗೌಡ ಅವರೂ ಅಕ್ರಮ ವಹಿವಾಟಿನ ಭಾಗವಾಗಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ದೂರು: ಈ ಸಂಬಂಧ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ನೀಡಿದ್ದ ತಾಲ್ಲೂಕಿನ ಬಗರ್‌ ಹುಕುಂ ಸಾಗುವಳಿ ಸಮಿತಿಯ (ಭೂ ಮಂಜೂರಾತಿ) ಮಾಜಿ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌, ಸಮಿತಿಯ ಮಾಜಿ ಸದಸ್ಯರಾದ ಜಿ.ಕೆ.ಕುಮಾರ್‌ ಅಲಿಯಾಸ್‌ ಕೆಂಚೇಗೌಡ, ಶೈಲಾ ಮೋಹನ್‌, ಟಿ.ಆರ್‌. ರಮೇಶ್‌ ಅಲಿಯಾಸ್‌ ರುದ್ರಯ್ಯ, ಪರ್ವತಗೌಡ ಅಲಿಯಾಸ್‌ ಕಾಳೇಗೌಡ, ಚೇತನಾ, ಈಶ್ವರ ಪ್ರಸಾದ್‌, ಎಸ್‌‌.ಎನ್‌.ಲಿಂಗೇಶ್‌, ಭಾಗ್ಯಮ್ಮ, ಸಮಿತಿ ಕಾರ್ಯದರ್ಶಿಗಳು ಹಾಗೂ ತಹಶೀಲ್ದಾರ್‌ಗಳಾದ ಬಿ.ಎ. ಜಗದೀಶ್‌, ಎಚ್‌.ಎಸ್‌. ಪರಮೇಶ್‌, ಜೆ.ಉಮೇಶ್‌, ಬಿ.ಎಸ್‌. ಪುಟ್ಟಶೆಟ್ಟಿ, ಯು.ಮೋಹನ್‌ ಕುಮಾರ್‌ ಸೇರಿದಂತೆ ಒಟ್ಟು 15ನೇ ಆರೋಪಿಗಳಿದ್ದಾರೆ.

ಎಫ್‌ಐಆರ್‌ನಲ್ಲಿ ಹಾಸನದ ಅನಾಮಧೇಯ ವ್ಯಕ್ತಿಯನ್ನು 16ನೇ ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಕಲಂ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.

ರಾಜಣ್ಣ ಅವರ ಖಾಸಗಿ ದೂರನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT