ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಶಾಸಕ ಉದಯ ಗರುಡಾಚಾರ್ ಶಿಕ್ಷೆಗೆ ಹೈಕೋರ್ಟ್ ತಡೆ

Published 24 ಏಪ್ರಿಲ್ 2024, 22:01 IST
Last Updated 24 ಏಪ್ರಿಲ್ 2024, 22:01 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣೆ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಶಾಸಕ ಉದಯ ಗರುಡಾಚಾರ್‌ ತಮ್ಮ ಮೇಲಿರುವ ಕ್ರಿಮಿನಲ್‌ ಪ್ರಕರಣಗಳ ಮಾಹಿತಿ ಮರೆಮಾಚಿದ್ದಾರೆ’ ಎಂಬ ಆರೋಪದಡಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಎರಡು ತಿಂಗಳು ಜೈಲು ಮತ್ತು ದಂಡ ಪಾವತಿ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಈ ಸಂಬಂಧ ಉದಯ ಗರುಡಾಚಾರ್‌ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದೆ.

‘ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದೋಷಾರೋಪಣೆ ಹೊರಿಸಿದ ಮತ್ತು ಆ ಸಂಬಂಧ ವಿಚಾರಣಾ ನ್ಯಾಯಾಲಯ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿದ ಸಂದರ್ಭದಲ್ಲಿ ಮಾತ್ರವೇ ಅಭ್ಯರ್ಥಿಯು ತನ್ನ ಮೇಲಿನ ಆರೋಪಗಳ ಕುರಿತ ಮಾಹಿತಿಯನ್ನು ತಿಳಿಸಬೇಕಾಗುತ್ತದೆ. ಆಗ ಮಾತ್ರವೇ ಅವರನ್ನು ಕ್ರಿಮಿನಲ್‌ ಪ್ರಕರಣದಲ್ಲಿನ ಆರೋಪಿ ಎಂದು ವ್ಯಾಖ್ಯಾನಿಸಬಹುದು. ಎಫ್‌ಐಆರ್‌ ಅಥವಾ ಖಾಸಗಿ ದೂರು ದಾಖಲಾದ ಮಾತ್ರಕ್ಕೆ ಆರೋಪಿಯಾಗಿ ದೃಢಪಟ್ಟು, ಚುನಾವಣಾ ಪ್ರಮಾಣ ಪತ್ರದಲ್ಲಿ ಪ್ರಕರಣದ ಮಾಹಿತಿ ನೀಡಬೇಕು ಎಂದರ್ಥವಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣವೇನು?: ‘ಶಾಸಕ ಉದಯ್ ಗರುಡಾಚಾರ್ 2018ರಲ್ಲಿ ಚಿಕ್ಕಪೇಟೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣ ಹಾಗೂ ಪತ್ನಿಯ ಬ್ಯಾಂಕ್‌ ವಿವರಗಳನ್ನು ಬಹಿರಂಗಪಡಿಸಿಲ್ಲ’ ಎಂದು ಆರೋಪಿಸಿ ಎಚ್‌.ಜಿ.ಪ್ರಶಾಂತ್‌ ಖಾಸಗಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯ (42ನೇ ಎಸಿಎಂಎಂ) ಚುನಾವಣಾ ಅಪರಾಧದ ಅಡಿಯಲ್ಲಿ ಎರಡು ತಿಂಗಳ ಸಾಧಾರಣ ಜೈಲು ಶಿಕ್ಷೆ ಮತ್ತು ₹ 10 ಸಾವಿರ ದಂಡ ವಿಧಿಸಿ 2022ರ ಅಕ್ಟೋಬರ್ 13ರಂದು ಆದೇಶಿಸಿತ್ತು.

ಆ ಆದೇಶವನ್ನು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ 2023ರ ಸೆಪ್ಟೆಂಬರ್ 11ರಂದು ಪುರಸ್ಕರಿಸಿತ್ತು. ಈ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ಉದಯ ಗರುಡಚಾರ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT