ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಪತ್ರಕರ್ತರು: ಎಚ್.ಕೆ.ಪಾಟೀಲ

ಹೊನಕೆರೆ ನಂಜುಂಡೇಗೌಡಗೆ ‘ಖಾದ್ರಿ ಶಾಮಣ್ಣ ಪ್ರಶಸ್ತಿ’ ಪ್ರದಾನ
Published 28 ಅಕ್ಟೋಬರ್ 2023, 15:48 IST
Last Updated 28 ಅಕ್ಟೋಬರ್ 2023, 15:48 IST
ಅಕ್ಷರ ಗಾತ್ರ

ಬೆಂಗಳೂರು:‌ ‘ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ಇತ್ತೀಚೆಗೆ ಪತ್ರಕರ್ತರು ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯ ಕಳೆದುಕೊಳ್ಳುವ ಸ್ಥಿತಿಗೆ ತಲುಪುತ್ತಿದ್ದಾರೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಕಳವಳ ವ್ಯಕ್ತಪಡಿಸಿದರು.

ಮೇಲುಕೋಟೆಯ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌, ಎಫ್‌ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ವಿಶೇಷ ವರದಿಗಾರ ಹೊನಕೆರೆ ನಂಜುಂಡೇಗೌಡ ಅವರಿಗೆ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಶೇ 50ರಷ್ಟು ಮಾತ್ರ ಉಳಿದಿದೆ. ಪತ್ರಕರ್ತರು ಎಷ್ಟೇ ಗರ್ವದಿಂದ ಅಭಿವ್ಯಕ್ತಿ  ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದರೂ ಪ್ರಬಲ ಜಾತಿ, ಶ್ರೀಮಂತರು, ಉದ್ಯಮಗಳ ವಿರುದ್ಧ ಬರೆಯಲು ಆಗುತ್ತಿಲ್ಲ. ಪ್ರಭಾವಿ ರಾಜಕಾರಣಿಗಳ ವಿರುದ್ಧ ಬರೆಯುವುದೂ ವಿರಳವಾಗಿದೆ. ಪತ್ರಿಕೋದ್ಯಮದ ಧ್ವನಿಯೇ ಕಡಿಮೆಯಾಗಿದೆ’ ಎಂದರು.

‘ಪ್ರತಿಯೊಬ್ಬ ಪತ್ರಿಕೋದ್ಯಮಿ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸಿ, ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಈ ವಿಚಾರದಲ್ಲಿ ಜಾಗೃತಗೊಳಿಸುವ ಕೆಲಸವನ್ನು ಹಿರಿಯ ಪತ್ರಕರ್ತರು ಮಾಡಬೇಕಿದೆ’ ಎಂದು ಸಲಹೆ ನೀಡಿದರು.

‘ಹಿಂದೆ ಸುದ್ದಿಗೋಷ್ಠಿಗೆ ಬರಬೇಕಾದರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ತಲೆ‌ಕೆರೆದುಕೊಂಡು ಬರುತ್ತಿದ್ದೆವು. ಆದರೆ, ಸ್ವರೂಪ ಬದಲಾಗಿದೆ. ತಲೆ ಬಾಚಿಕೊಂಡು ಬಂದರೆ ಸಾಕಾಗುತ್ತದೆ’ ಎಂದು ವ್ಯಂಗ್ಯವಾಗಿ ಹೇಳಿ‌ದರು.

‘ರಾಜಕಾರಣಿಗಳು ಪರಸ್ಪರ ನಿಂದಿಸುವ ಸುದ್ದಿಗಳೇ ವರ್ಷದ 100 ದಿನ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಮುಖವಾಗುತ್ತಿದೆ. ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವ ಕೆಲಸವನ್ನು ಪತ್ರಕರ್ತರು ಮಾಡಬಾರದು. ಸಮಾಜ, ಸರ್ಕಾರ, ರಾಜಕೀಯ, ಸಾಮಾಜಿಕ ಕ್ಷೇತ್ರದೊಳಗೆ ಭ್ರಷ್ಟಾಚಾರವನ್ನು ಒಪ್ಪಿಕೊಂಡು ಅದಕ್ಕೆ ಗೌರವ ಸಲ್ಲಿಸಲು ಆರಂಭಿಸಿದ್ದೇವೆ. ಈ ಬಗ್ಗೆ ನಾವು ಜಾಗೃತರಾಗಬೇಕಿದೆ.‌ ಭವಿಷ್ಯದ ಜನಾಂಗಕ್ಕೆ ಉತ್ತಮವಾದದ್ದನ್ನು ಮರಳಿ ತರದಿದ್ದರೆ ಕರ್ತವ್ಯ ಚ್ಯುತಿ ಮಾಡಿದಂತೆ ಆದೀತು’ ಎಂದೂ ಹೇಳಿದರು.

‘ಪ್ರಶಸ್ತಿಗೆ ಪಾತ್ರರಾದ ನಂಜುಂಡೇಗೌಡರು ತಮ್ಮ ಪರಿಣಾಮಕಾರಿ ವರದಿಗಾರಿಕೆಯ ಮೂಲಕ ಗುರುತಿಸಿಕೊಂಡಿದ್ದಾರೆ’ ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿದ ಹೊನಕೆರೆ ನಂಜುಂಡೇಗೌಡ ಮಾತನಾಡಿ, ‘ಪ್ರಶಸ್ತಿಯ ನಗದನ್ನು ಖಾದ್ರಿ ಶಾಮಣ್ಣ ಟ್ರಸ್ಟ್‌ಗೆ ಮರಳಿ ನೀಡುತ್ತಿದ್ದು, ಈ ಟ್ರಸ್ಟ್‌ ಇನ್ನಷ್ಟು ಬೆಳೆಯಲಿ’ ಎಂದು ಆಶಿಸಿದರು.

ಪತ್ರಕರ್ತರಾದ ಆರ್.ಪಿ. ಜಗದೀಶ್, ನಾಗಣ್ಣ, ಖಾದ್ರಿ ಶಾಮಣ್ಣ ಟ್ರಸ್ಟ್‌ನ ಶ್ರೀಶ, ವಕೀಲ ಬಿ.ಟಿ. ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT