ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕೃಷಿ ಕಾಯ್ದೆ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು: ನಾಗಮೋಹನದಾಸ್‌

Last Updated 12 ಜನವರಿ 2023, 19:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ಒತ್ತಾಯಿಸಿದರು.

ಜನಾಂದೋಲನಗಳ ಮಹಾಮೈತ್ರಿ ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ‘ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆಯ ಜಾಥಾಗಳ ಸಮಾಗಮ ಸತ್ಯಾಗ್ರಹ ಸಮಾವೇಶ’ದಲ್ಲಿ ಅವರು ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ, ಎಸ್.ಆರ್. ಹಿರೇಮಠ, ಸಿ. ಯತಿರಾಜು, ಟಿ.ಆರ್. ಚಂದ್ರಶೇಖರ್ ಮತ್ತು ದಿಲೀಪ್‌ ಕಾಮತ್‌ ಬರೆದ ‘ಮೂರು ಕರಾಳ ಕೃಷಿ ಕಾಯಿದೆಗಳು ಮತ್ತು ಸರ್ಕಾರವನ್ನು ಕಿತ್ತೊಗೆಯುವ ಜನತೆಯ ಹಕ್ಕು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದರೂ ರಾಜ್ಯ ಇದುವರೆಗೂ ಈ ಕಾನೂನುಗಳನ್ನು ಹಿಂಪಡೆದಿಲ್ಲ. ರೈತರು ಸಂಘಟಿತ ಹೋರಾಟದ ಮೂಲಕ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಹಲವಾರು ತಿಂಗಳುಗಳಿಂದ ರೈತ ಸಂಘಟನೆಗಳು, ಕೃಷಿ ಕಾರ್ಮಿಕರು ಹೋರಾಟ ಮತ್ತು ನಡೆಸುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಹೇಳಿದರು.

‘ರೈತರ ಎಲ್ಲ ಬೆಳೆಗಳಿಗೆ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಕನಿಷ್ಠ ಬೆಂಬಲ ಬೆಲೆ ದೊರೆಯುವಂತಾಗಬೇಕು. ಸಮಾಜದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆ, ಅಸ್ಪೃಶ್ಯತೆ ಆಚರಣೆಯನ್ನು ನಿಯಂತ್ರಿಸಬೇಕು. ಶಾಲಾ–ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಬೋಧಿಸಬೇಕು. ಸರ್ಕಾರವು ಶಿಕ್ಷಣದ ಖಾಸಗೀಕರಣ, ಸಮಾಜದ ಕೋಮುವಾದೀಕರಣದ ನಿಯಂತ್ರಕ್ಕೆ ಕ್ರಮ ಕೈಗೊಳ್ಳಬೇಕು. ರಾಜ್ಯವನ್ನು ಸರ್ವ ಜನಾಂಗದ ಶಾಂತಿ ತೋಟವನ್ನಾಗಿ ಮಾಡಬೇಕು’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

‘ಕಾರ್ಮಿಕ ವಿರೋಧಿ ಮತ್ತು ಬಂಡವಾಳಶಾಹಿಗಳ ಪರ ಕಾರ್ಮಿಕ ಕಾಯ್ದೆಗಳನ್ನು ರದ್ದುಪ‍ಡಿಸಿ, ಹಿಂದಿನ ಕಾನೂನುಗಳನ್ನೇ ಜಾರಿಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳು, ಭೂಮಿಯ ಖಾಸಗೀಕರಣ ಮತ್ತು ಮಾರಾಟವನ್ನು ಕೂಡಲೇ ಸ್ಥಗಿತಗೊಳಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಆಗ್ರಹಿಸಿದರು.

ಮಹಮದ್‌ ಯೂಸೂಫ್‌ ಖನ್ನಿ, ರಾಘವೇಂದ್ರ ಕುಷ್ಟಗಿ, ಬಿ.ಆರ್.ರಾಮೇಗೌಡ, ಬಹುಜನ ಸಂಘಟನೆಯ ಚನ್ನಕೃಷ್ಣಪ್ಪ, ಮಂಜುಳಾ ಅಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT