ಬೆಂಗಳೂರು: ‘ಮಾಡಿರುವ ಕಾಮಗಾರಿಯನ್ನು ಗುತ್ತಿಗೆದಾರರು ಸಾಬೀತುಪಡಿಸಲಿ. ಯಾರೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಅವರಿಗೆಲ್ಲ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಕಾನೂನು ಪ್ರಕಾರ ತನಿಖೆ ಮಾಡಬೇಕು ಎಂದು ಹೇಳಿದ್ದೇವೆ. ಕೆಂಪಣ್ಣ ದೂರು ಕೊಟ್ಟಿದ್ದಾರೆ. ಅವರಿಗೆ ನ್ಯಾಯ ಒದಗಿಸಬೇಕು. ಕಾಮಗಾರಿಗೂ ನ್ಯಾಯ ಒದಗಿಸಬೇಕು. ಜನರಿಗೂ ನ್ಯಾಯ ಓದಗಿಸಬೇಕು. ಸರ್ಕಾರಕ್ಕೂ ನ್ಯಾಯ ಒದಗಿಸಬೇಕು. ಪ್ರಚಾರಕ್ಕೆ ಯಾರು ಬೇಕಾದರೂ ಹೋಗಲಿ’ ಎಂದರು.
‘ದೆಹಲಿಗೆ ಬಂದು ಹೇಳಿಕೆ ಕೊಡುವಂತೆ ಗುತ್ತಿಗೆದಾರರನ್ನು ಯಾರು ಕರೆಯುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಮಾಧ್ಯಮದವರ ಮುಂದೆ ಯಾರು ಕಳುಹಿಸುತ್ತಿದ್ದಾರೆಂದೂ ಗೊತ್ತಿದೆ. ಎಲ್ಲವೂ ನನಗೆ ಗೊತ್ತಿದೆ’ ಎಂದೂ ಹೇಳಿದರು.
ಕಾಮಗಾರಿ ಪರಿಶೀಲನೆ ಮಾಡಿ ಬಿಲ್ ಪಾವತಿ: ‘ನಾವು ಭ್ರಷ್ಟಾಚಾರ ಆರೋಪ ಮಾಡುತ್ತಿಲ್ಲವೆಂದು ಕೆಂಪಣ್ಣ ಅವರೇ ಹೇಳಿದ್ದಾರೆ. ಅವರ ಆರೋಪ ಇರುವುದು ಬಿಲ್ ಪಾವತಿ ವಿಳಂಬ ಆಗುತ್ತಿರುವ ಬಗ್ಗೆ. ಅದಕ್ಕೆ ದಯವಿಟ್ಟು ಸಹನೆಯಿಂದ ಇರಿ, ಕಾಮಗಾರಿ ಪರಿಶೀಲನೆ ಮಾಡಿ ಬಿಲ್ ಪಾವತಿ ಮಾಡುತ್ತೇವೆಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ಮೂರನೇ ಪಾರ್ಟಿ ವರದಿ ಇದ್ದರೆ ಬಿಲ್ ಬಿಡುಗಡೆ ಮಾಡುತ್ತೇವೆಂದು ಉಪ ಮುಖ್ಯಮಂತ್ರಿ ಹೇಳಿದ್ದಾರಲ್ಲಾ... ಸಮಸ್ಯೆ ಏನು..? ಬಿಜೆಪಿಯವರ ಅವಧಿಯಲ್ಲಿ ಇದ್ದ ಕೆಲವು ಅಧಿಕಾರಿಗಳು ಇನ್ನೂ ವರ್ಗಾವಣೆ ಆಗಿಲ್ಲ. ಅವರು ಹಳೇ ದಿನಾಂಕ ನಮೂದಿಸಿ ಬಿಲ್ ಮಾಡುತ್ತಿದ್ದಾರೆ. ಸಾಕಷ್ಟು ನಿದರ್ಶನ ನನ್ನ ಇಲಾಖೆಯಲ್ಲೇ ಇದೆ. ನಾನು ಅವುಗಳನ್ನು ತಡೆಹಿಡಿದಿದ್ದೇನೆ’ ಎಂದರು.
‘ಗುತ್ತಿಗೆದಾರರು ನನ್ನ ಬಳಿಗೂ ಬಂದು ಬಿಲ್ ಬಿಡುಗಡೆ ಆಗುತ್ತಿಲ್ಲ ಎಂದು ಹೇಳಿದ್ದರು. ಕಾನೂನು ಪ್ರಕಾರ ಬಿಲ್ ಬಿಡುಗಡೆ ಮಾಡುತ್ತಿದ್ದೇವೆ. ಕಳೆದ ಬಾರಿ ದುಡ್ಡು ತೆಗೆದುಕೊಂಡಿರಬೇಕು. ಅದಕ್ಕೆ ಬಿಜೆಪಿಯವರು ಈಗ ಗುತ್ತಿಗೆದಾರ ಪರ ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕಾಮಗಾರಿ ಆಗಿದೆಯೇ ಎಂದು ಪರಿಶೀಲನೆ ಮಾಡುವುದು ಬೇಡವೇ? ಚಿಂಚೋಳಿಯಲ್ಲಿ 55 ಬಾರಿ ಒಂದೇ ಕಾಮಗಾರಿಗೆ ಬಿಲ್ ಮಾಡಿದ್ದಾರೆ. ಅದನ್ನೂ ಬಿಡುಗಡೆ ಮಾಡಬೇಕೇ’ ಎಂದು ಪ್ರಶ್ನಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಜೆಡಿಎಸ್ ಮತ್ತು ಬಿಜೆಪಿಯವರು ಎಸ್‌ಟಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೊ ಇಲ್ಲವೋ ನನಗೆ ಗೊತ್ತಿಲ್ಲ. ₹ 10 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದನ್ನು ಈ ಹಿಂದೆ ಸದನದಲ್ಲಿ ಬಿಜೆಪಿಯವರು ಒಪ್ಪಿಕೊಂಡಿದ್ದರು’ ಎಂದರು.
‘ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಈ ಕಾಯ್ದೆಯಡಿ ಮೀಸಲಿಟ್ಟ ಅನುದಾನ ಬಳಕೆ ಮಾಡುತ್ತೇವೆ. ಕಾನೂನು ಪ್ರಕಾರವೇ ವೆಚ್ಚ ಮಾಡುತ್ತೇವೆ. ಅವರು (ಬಿಜೆಪಿ, ಜೆಡಿಎಸ್‌ನವರು) ಮೊದಲು ಕಾಯ್ದೆ ಬಗ್ಗೆ ತಿಳಿದುಕೊಳ್ಳಲಿ. ನಾವು ಎಲ್ಲಿ ಹಣ ಬಳಕೆ ಮಾಡುತ್ತೇವೆಂದು ಹೇಳುತ್ತೇವೆ’ ಎಂದರು.
ತನಿಖಾ ವರದಿ ಬಂದ ಮೇಲೆ ಗುತ್ತಿಗೆದಾರರಿಗೆ ಹಣ ಬಿಡುಗಡೆ: ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ‘ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿ ತನಿಖೆಗೆ ಸಮಿತಿ ರಚಿಸಲಾಗಿದೆ. ತನಿಖಾ ವರದಿ ಬಂದ ಮೇಲೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಆಗುತ್ತದೆ’ ಎಂದರು.
‘ಇನ್ನೂ ಬಿಲ್ ಕೊಟ್ಟೇ ಇಲ್ಲ, ಆಗಲೇ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿಯವರು ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು ಎಂದು ನಾನು ಕೂಡಾ ಹೇಳುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.