ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ತಿಂಗಳಿಂದ ಮಾನವ ಹಕ್ಕು ಆಯೋಗಕ್ಕೆ ಅಧ್ಯಕ್ಷರಿಲ್ಲ

ಆಯೋಗದ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಆಕ್ಷೇಪ; ರಾಜ್ಯಪಾಲರಿಗೆ ದೂರು
Published 8 ನವೆಂಬರ್ 2023, 15:50 IST
Last Updated 8 ನವೆಂಬರ್ 2023, 15:50 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಹಾಗೂ ಇಬ್ಬರು ಸದಸ್ಯರ ಹುದ್ದೆಗಳು ಏಳು ತಿಂಗಳಿಂದ ಖಾಲಿ ಉಳಿದಿವೆ. ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ 2,243 ಪ್ರಕರಣಗಳು ಆಯೋಗದಲ್ಲಿ ವಿಚಾರಣೆಗೆ ಬಾಕಿ ಇವೆ. ಕರ್ನಾಟಕ ಸರ್ಕಾರ ಆರಂಭಿಸಿರುವ ಸದಸ್ಯರ ಆಯ್ಕೆ ಪ್ರಕ್ರಿಯೆಗೂ ಆಕ್ಷೇಪ ವ್ಯಕ್ತವಾಗಿದೆ. 

ಆಯೋಗದ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರ ಅಧಿಕಾರದ ಅವಧಿ ಮಾರ್ಚ್‌ನಲ್ಲಿ ಮುಗಿದಿತ್ತು. ಸದಸ್ಯರಾಗಿದ್ದ ಕೆ.ಬಿ.ಚೆಂಗಪ್ಪ ಹಾಗೂ ಆರ್‌.ಕೆ.ದತ್ತ ಅವಧಿ ಫೆಬ್ರುವರಿಗೆ ಮುಕ್ತಾಯಗೊಂಡಿತ್ತು. ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆ ಖಾಲಿಯಾದರೆ ಮೂರು ತಿಂಗಳೊಳಗೆ ಭರ್ತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ (ಡಿ.ಕೆ.ಬಸು ಪ್ರಕರಣ) ನಿರ್ದೇಶನ ನೀಡಿದೆ. ಆದರೆ, ರಾಜ್ಯ ಸರ್ಕಾರವು ಹುದ್ದೆಗಳ ಭರ್ತಿ ಮಾಡಿರಲಿಲ್ಲ.

ಈ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ವಕೀಲರಾದ ಸುಧಾ ಕಟ್ವಾ ಅವರು ಕರ್ನಾಟಕ ಕಾನೂನು ಇಲಾಖೆಗೆ ಮನವಿ ಸಲ್ಲಿಸಿದ್ದರು. ಜತೆಗೆ, ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಅವರು ಜೂನ್‌ ತಿಂಗಳಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪೀಠವು ಮುಖ್ಯ ಕಾರ್ಯದರ್ಶಿ ಹಾಗೂ ಕಾನೂನು ಇಲಾಖೆಯ ಕಾರ್ಯದರ್ಶಿಗೆ ನೋಟಿಸ್‌ ನೀಡಿತ್ತು. ವಿಧಾನಸಭೆಯ ವಿರೋಧ ಪಕ್ಷದ ನಾಯಕರ ನೇಮಕ ಆಗದ ಕಾರಣ ಆಯೋಗದ ಅಧ್ಯಕ್ಷರ ನೇಮಕಾತಿ ವಿಳಂಬವಾಗಿದೆ ಎಂದು ರಾಜ್ಯ ಸರ್ಕಾರವು ನ್ಯಾಯಪೀಠಕ್ಕೆ ಪ್ರತಿಕ್ರಿಯೆ ನೀಡಿತ್ತು. ಈ ಪ್ರಕರಣದ ವಿಚಾರಣೆ ಬಾಕಿ ಉಳಿದಿದೆ.

ಇನ್ನೊಂದೆಡೆ, ಆಯೋಗದ ಸದಸ್ಯರ ಹುದ್ದೆಗಳ ಭರ್ತಿ ಮಾಡಲು ಕಾನೂನು ಇಲಾಖೆಯು ಜೂನ್‌ 19ರಂದು ಅಧಿಸೂಚನೆ ಹೊರಡಿಸಿತ್ತು. ಅರ್ಹರು 20 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಅರ್ಜಿ ಸಲ್ಲಿಕೆಗೆ ಜುಲೈ 9 ಕೊನೆಯ ದಿನಾಂಕವಾಗಿತ್ತು. ಜುಲೈ 10ರ ಬಳಿಕವೂ ಆರು ಮಂದಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದು, ಈ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದ್ದಾರೆ.

‘ನಜೀರ್ ವಿ.ಎ., ಶ್ರೀಕಾಂತ ರಾವ್‌, ರಾಜ್‌ ಕಿಶೋರ್‌ ಸಿಂಗ್‌ ಹಾಗೂ ಎಸ್‌.ಯು.ಪಾಟೀಲ ಅವರು ಜುಲೈ 11ರಂದು, ಎ.ರಾಮರಾಜು ಅರಸು ಅವರು ಜುಲೈ 12ರಂದು ಹಾಗೂ ಅಶಿತ್‌ ಮೋಹನ್‌ ಪ್ರಸಾದ್‌ ಅವರು ಜುಲೈ 18ರಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಕಾನೂನು ಇಲಾಖೆಯ ಕಾರ್ಯದರ್ಶಿ ಪ್ರಭಾವತಿ ಎಂ.ಹಿರೇಮಠ ಹೇಳಿದ್ದರು. ಅವರನ್ನು ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಲಾಗಿದೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಇಂಥ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಡೆಯ ದಿನಾಂಕದ ನಂತರ ಸ್ವೀಕೃತವಾಗುವ ಅರ್ಜಿಗಳು ಅಮಾನ್ಯ ಆಗುತ್ತವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕರ್ನಾಟಕ ಸರ್ಕಾರವು ಇಂತಹ ಅರ್ಜಿಗಳನ್ನು ಪರಿಗಣಿಸಿದರೆ ಕಾನೂನು ಹೋರಾಟಕ್ಕೂ ದಾರಿ ಮಾಡಿಕೊಟ್ಟಂತೆ ಆಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT