ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜೆಟ್ ವಿರುದ್ಧವಾಗಿ ಹೈದರಾಬಾದ್ ಕರ್ನಾಟಕ ಮೀಸಲಾತಿ: ಆರೋಪ

Last Updated 22 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಬೆಂಗಳೂರು: ಹೈದರಾಬಾದ್ ಕರ್ನಾಟಕ ಭಾಗ ಮೀಸಲಾತಿಯನ್ನು(371–ಜೆ) ಮೂಲ ಗೆಜೆಟ್‌ ಆದೇಶಕ್ಕೆ ವಿರುದ್ಧವಾಗಿ ಕಲ್ಪಿಸಲಾಗುತ್ತಿದ್ದು, ಇದರಿಂದ ಬೇರೆ ಜಿಲ್ಲೆಗಳ (ಹೈದರಾಬಾದ್ ಕರ್ನಾಟಕವಲ್ಲದ) ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಭ್ಯರ್ಥಿಗಳ ಹೋರಾಟ ಸಮಿತಿ ಆರೋಪಿಸಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ‘ನಾನ್ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳ ಹೋರಾಟ ಸಮಿತಿ’ಯ ಅರ್ಜುನ್‌, ‘ಪೊಲೀಸ್ ಮತ್ತು ಹೈಕೋರ್ಟ್‌ ನೇಮಕಾತಿ ಹೊರತುಪಡಿಸಿ ಬೇರೆಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ಅನ್ಯಾಯವಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗಗಳು ವಿಫಲವಾಗುತ್ತಿವೆ. ಇದರಿಂದ ಉಳಿದ 24 ಜಿಲ್ಲೆಯ ಅಭ್ಯರ್ಥಿಗಳು ಸರ್ಕಾರಿ ಹುದ್ದೆ ಪಡೆಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ’ ಎಂದರು.

ಮೂಲ ಆದೇಶದ ಪ್ರಕಾರ ಹೈದರಾಬಾದ್ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕವಲ್ಲದ ವೃಂದಗಳನ್ನು ಪ್ರತ್ಯೇಕ ಘಟಕ ಎಂದೇ ಪರಿಗಣಿಸಬೇಕು. ಆದರೆ, ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಎರಡೂ ಕಡೆ ಅನುಕೂಲ ಮಾಡಲಾಗುತ್ತಿದ್ದು, ಇದರಿಂದ ಬೇರೆಯವರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ವಿಶೇಷ ಕೋಶವು ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರತಿಯೊಂದು ನೇಮಕಾತಿಗೂ ಒಂದೊಂದು ರೀತಿಯ ಸುತ್ತೋಲೆಗಳನ್ನು ಹೊರಡಿಸುತ್ತಿದೆ. ಮೀಸಲಾತಿಯನ್ನು ಹೇಗೆ ಜಾರಿಗೊಳಿಸಬೇಕು ಎಂಬುದು ನಿಯಮಗಳಲ್ಲಿ ಸ್ಪಷ್ಟವಾಗಿದ್ದರೂ ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು.

ವಿಶೇಷ ಕೋಶದ ಅಧಿಕಾರಿಗಳಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಅಧಿಕಾರಿಗಳ ವಿರುದ್ಧ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT