ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ವ್ಯವಸಾಯ ಆರಂಭಿಸಿದ್ದೇನೆ, ನೀವೂ ಕೃಷಿ ಮಾಡಿ: ಯುವಕರಿಗೆ ನಿಖಿಲ್‌ ಮನವಿ 

ಅಕ್ಷರ ಗಾತ್ರ

ನಾನೂ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ. ನೀವು ಕೃಷಿ ಮಾಡಿ ಎಂಬ ಸಂದೇಶವೊಂದನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್‌ ಕುಮಾರಸ್ವಾಮಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಕೃಷಿ ಜಮೀನಿನಲ್ಲಿ ಓಡಾಡುತ್ತಿರುವ ಫೋಟೊಗಳನ್ನೂ ನಿಖಿಲ್‌ ಕುಮಾರಸ್ವಾಮಿ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ.

ಅವರ ಫೇಸ್‌ಬುಕ್‌ ಬರಹ ಹೀಗಿದೆ...

ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತ ಈ ದೇಶದ ಬೆನ್ನೆಲುಬು ಎಂದು ಗೌರವ ಸಲ್ಲಿಸುತ್ತೇವೆ. ಆದರೆ ರೈತರ ಮಕ್ಕಳು ರೈತರಾಗಿ ಅವರ ಕೃಷಿಭೂಮಿಯಲ್ಲಿ ದುಡಿಯಲು ಹಿಂಜರಿದು ನಗರದ ಕಡೆಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹವಣಿಸುವವರ ಸಂಖ್ಯೆಯೇ ಹೆಚ್ಚು. ತಾವು ಕಲಿತ ವಿದ್ಯಾಭ್ಯಾಸದ ಆಧಾರದ ಮೇಲೆ ನಗರಗಳಲ್ಲಿ ಕೆಲಸವೊಂದನ್ನು ಸಂಪಾದಿಸಿ ಜೀವನ ನಡೆಸುವವರು ಒಂದು ಕಡೆಯಾದರೆ ಇನ್ನು ಕೆಲವರು ಸ್ವಂತ ಉದ್ಯೋಗ ಅಥವಾ ಕೂಲಿ ಕೆಲಸವನ್ನಾದರೂ ನಗರದಲ್ಲಿ ಮಾಡಿಕೊಂಡು ಜೀವನ ನಡೆಸಲು ನಗರಗಳ ಕಡೆಗೆ ಮುಖಮಾಡುವವರು ಇನ್ನೊಂದು ಕಡೆ. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿರುವ ಕೃಷಿಭೂಮಿಗಳು ಪಾಲು ಬೀಳುತ್ತಿವೆ. ನಗರದಲ್ಲಿ ವೃತ್ತಿ ಸ್ಪರ್ಧೆ ತಾರಕಕ್ಕೇರಿದೆ.

ಡಾಕ್ಟರ್ ತನ್ನ‌ ಮಗ ಡಾಕ್ಟರ್ ‌ಆಗಲಿ, ಪೊಲೀಸ್ ತನ್ನ ಮಗನೂ ತನ್ನಂತೆಯೇ ಪೊಲೀಸ್ ಆಗಲಿ ಸರ್ಕಾರಿ‌ ನೌಕರ ತನ್ನ ಮಗನೂ ಸರ್ಕಾರಿ ನೌಕರನಾಗಲಿ ಎಂದು ಆಸೆ ಪಡುತ್ತಾನೆ. ಆದರೆ ನಮ್ಮ ದೇಶದ ರೈತ ತನ್ನ ಮಗನೂ ರೈತನಾಗಲಿ ಎಂದು ಎಂದೂ ಬಯಸದ ಪರಿಸ್ಥಿತಿ ಇದೆ. ತಾನು ಪಟ್ಟ ಕಷ್ಟ ತನಗೇ ಕೊನೆಯಾಗಲಿ ನನ್ನ ಮಕ್ಕಳಿಗೆ ಈ ಕಷ್ಟ ಬೇಡ ಎಂದು ಸಾಲ ಮಾಡಿಯಾದರೂ ಮಕ್ಕಳನ್ನು ಓದಿಸಿ ಉದ್ಯೋಗಕ್ಕಾಗಿ ನಗರಗಳಿಗೆ ಕಳುಹಿಸುತ್ತಾರೆ. ರೈತರಿಗೆ ತಾವು ಏನೇ ಬೆಳೆದರೂ ಅದಕ್ಕೆ ಬೆಲೆ ನಿಗದಿ ಮಾಡುವ ಅಧಿಕಾರವೂ ಆತನಿಗಿಲ್ಲ. ಜೀವಮಾನವಿಡೀ ದುಡಿದು ಬದುಕುವ ರೈತನಿಗೆ ಈ ದೇಶದ ಮೊದಲ ಗೌರವ ಸಿಗಬೇಕಿದ್ದು ಸರ್ಕಾರಿ ಅಧಿಕಾರಿಗಳು ಹಾಗೂ ಬ್ಯಾಂಕ್ ನೌಕರರು ರೈತರು ತಮ್ಮ ಕಚೇರಿಗೆ ಬಂದಾಗ ಗೌರವದಿಂದ ನಡೆಸಿಕೊಳ್ಳಬೇಕು. ಜಮೀನಿನಲ್ಲಿ ಮುಳ್ಳು ಚುಚ್ಚಿ ಮಣ್ಣಿಗೆ ರಕ್ತದ ಅಭಿಷೇಕವಾದರೂ ಮರುದಿನ ಅದೇ ಜಮೀನಿನಲ್ಲಿ ಕೆಲಸ ಮಾಡುವ ರೈತನಿಗೆ ಘನತೆಯ ಬದುಕನ್ನು ಕಟ್ಟಿ ಕೊಡಬೇಕಿದೆ. ರೈತರ ಮಕ್ಕಳು ಕೃಷಿಭೂಮಿಯಲ್ಲಿ ಕೆಲಸ ಮಾಡುವುದು ಒಂದು ಗೌರವ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು.ರೈತನಾಗಿ ಬದುಕುವುದು ದೌರ್ಭಾಗ್ಯವಲ್ಲ ಬದಲಾಗಿ ಅದೊಂದು ಸೌಭಾಗ್ಯ ಅನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು.

ನಗರದಿಂದ ಮತ್ತೆ ಊರುಗಳಿಗೆ ಹಿಂದಿರುಗಿ ತಮ್ಮ ತಮ್ಮ ಕೃಷಿಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ನಿಮಗೆಲ್ಲರಿಗೂ ಯಶಸ್ಸು ಸಿಗಲಿ. ರೈತನ ಮಗನೆಂದು ಹೆಮ್ಮೆಯಿಂದ ಹೇಳಿ. ವಿದ್ಯಾಭ್ಯಾಸವಿರುವ ಯುವಕರು ವ್ಯವಸಾಯಕ್ಕಾಗಿ ಜಮೀನಿಗಿಳಿದರೆ ಮಧ್ಯವರ್ತಿಗಳ ಮೋಸವೂ ಕಡಿಮೆಯಾಗಲಿದೆ. ಆಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ.‌ ಕೃಷಿಯಲ್ಲೆ ಉನ್ನತ ಪದವಿ ಪಡೆದ ರೈತರ ಮಕ್ಕಳೇ ದೇಶದ ಕೃಷಿನೀತಿಯನ್ನು ನಿರ್ಧರಿಸುವಂತಾಗಲಿ. ಇದರ ಜೊತೆಗೆ ಸರ್ಕಾರಗಳು ಸಹಾ ಕೃಷಿ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹವನ್ನು ನೀಡಿದರೆ ದೇಶದಲ್ಲಿ ರೈತನೆಂದರೆ ಎದ್ದು ಕೈಮುಗಿಯುವ ದಿನಗಳು ದೂರವಿಲ್ಲ.

ನಾನು ಸಹಾ ರೈತನ ಮಗನಾಗಿದ್ದು ನಮ್ಮ ಜಮೀನಿನಲ್ಲಿ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ. ಇದೇ ರೀತಿ‌ ನಗರದಿಂದ ಹಳ್ಳಿಗಳಿಗೆ ಹಿಂತಿರುಗಿ ವ್ಯವಸಾಯದಲ್ಲಿ ತೊಡಗಿರುವ ಎಲ್ಲಾ ರೈತರ ಮಕ್ಕಳಿಗೂ ಯಶಸ್ಸು ಸಿಗಲಿ.

ರಾಮನಗರ ಜಿಲ್ಲೆಯ ಬಿಡದಿ ಸಮೀಪ ಕೇತಿಗಾನಹಳ್ಳಿ ಎಂಬಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಕೃಷಿ ಭೂಮಿ ಹೊಂದಿದ್ದು, ಅಲ್ಲಿಯೇ ನಿಖಿಲ್‌ ಅವರ ವಿವಾಹವೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT