ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ. ಸೋಮಣ್ಣಗೆ ಟಿಕೆಟ್ ನೀಡಿದರೆ ಗೆಲುವಿಗೆ ದುಡಿಯುತ್ತೇನೆ ಎಂದ ಸಂಸದ GS ಬಸವರಾಜು

ಬರುವ ಲೋಕಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಬೆಂಬಲಿಸುತ್ತೇನೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.
Published 25 ನವೆಂಬರ್ 2023, 11:28 IST
Last Updated 25 ನವೆಂಬರ್ 2023, 11:28 IST
ಅಕ್ಷರ ಗಾತ್ರ

ತುಮಕೂರು: ‘ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಿದರೆ ಅವರ ಗೆಲುವಿಗೆ ಶಿರಸಾವಹಿಸಿ ಕೆಲಸ ಮಾಡುತ್ತೇನೆ’ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದೆ ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧ ಎಚ್.ಡಿ.ದೇವೇಗೌಡ ಸ್ಪರ್ಧಿಸಿದ್ದ ಸಮಯದಲ್ಲಿ ಜಿಲ್ಲೆಯ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದರು. ನನ್ನ ಭವಿಷ್ಯ ಅವರ ಕೈಯಲ್ಲಿ ಇತ್ತು. ನನ್ನ ಪರವಾಗಿ ಕೆಲಸ ಮಾಡಿದ್ದು, ಈಗ ಅವರಿಗೆ ಟಿಕೆಟ್ ನೀಡಿದರೆ ಗೆಲುವಿಗೆ ಶ್ರಮಿಸುತ್ತೇನೆ’ ಎಂದರು.

ಸೋಮಣ್ಣ ಅವರಿಗೆ ಟಿಕೆಟ್ ನೀಡುವಂತೆ ಕೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ‘ನಾನು ಹೇಳಿದಾಕ್ಷಣ ಟಿಕೆಟ್ ಕೊಡುವುದಿಲ್ಲ. ಹೈಕಮಾಂಡ್‌ಗೆ ಯಾವ ಸಂದರ್ಭದಲ್ಲಿ ಏನು ಹೇಳಬೇಕು ಅದನ್ನು ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ನಾನೇನು ಕುರುಡನಾ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಸೋಮಣ್ಣ ಈವರೆಗೂ ಬಿಜೆಪಿಯಲ್ಲೇ ಇದ್ದಾರೆ. ಬಿಜೆಪಿಯಿಂದೇ ಅಭ್ಯರ್ಥಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ತುಮಕೂರಿನಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನವರು ಆಹ್ವಾನ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್‌ನವರು ನನ್ನನ್ನೂ ಕರೆಯುತ್ತಿದ್ದಾರೆ. ಬಿಜೆಪಿಯಲ್ಲಿ ವಯಸ್ಸಿನ ಮೀತಿ ಹಾಕುತ್ತಾರೆ. ನಮ್ಮಲ್ಲಿ ಅಂತಹ ಮಿತಿ ಇಲ್ಲ. ಬನ್ನಿ ಎಂದು ಕಾಂಗ್ರೆಸ್ ನಾಯಕರು ಆಹ್ವಾನ ನೀಡಿದ್ದಾರೆ. ನನಗೆ ವಯಸ್ಸಾಗಿದೆ. ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಹೊಸ ಮುಖಗಳಿಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದರು.

ಮುದ್ದಹನುಮೇಗೌಡ ‘ಆ ಪಾರ್ಟಿ– ಈ ಪಾರ್ಟಿ’

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ‘ಆ ಪಾರ್ಟಿ– ಈ ಪಾರ್ಟಿ’ಯಲ್ಲಿ ಇದ್ದವರು. ಕಳೆದ ವರ್ಷ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದವರು ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

‘ಮುದ್ದಹನುಮೇಗೌಡ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷದ ಒಳಗೆ ಏನೇನೋ ಇರುತ್ತದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ ಸೋಮಣ್ಣ ನಿಂತರೆ ಬೆಂಬಲಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT