ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್: ಹಲವು ಹುದ್ದೆಯ ಸೌಭಾಗ್ಯ- ಅನೇಕರಿಗೆ ‘ಸ್ಥಳ ನಿರೀಕ್ಷೆಯ’ ಭಾಗ್ಯ!

ವಿಶೇಷ ವರದಿ
Published 16 ಅಕ್ಟೋಬರ್ 2023, 20:11 IST
Last Updated 16 ಅಕ್ಟೋಬರ್ 2023, 20:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಐಎಎಸ್‌ (ಭಾರತೀಯ ನಾಗರಿಕ ಸೇವೆ) ಅಧಿಕಾರಿಗಳ ಪೈಕಿ ಕೆಲವರು ಮಹತ್ವದ, ಆಯಕಟ್ಟಿನ 2–3 ಹುದ್ದೆಗಳನ್ನು ಅಲಂಕರಿಸಿದ್ದರೆ, ಹುದ್ದೆ ಖಾಲಿ ಇದ್ದರೂ ಕೆಲವು ಅಧಿಕಾರಿಗಳು ಹಲವು ತಿಂಗಳುಗಳಿಂದ ‘ಸ್ಥಳ ನಿರೀಕ್ಷೆ’ಯಲ್ಲಿ ಕಾಲ ಕಳೆಯುತ್ತಿದ್ದಾರೆ!

ಇಷ್ಟ ಇಲ್ಲದವರನ್ನು ‘ವರ್ಗಾವಣೆ’ ಅಸ್ತ್ರ ಬಳಸಿ ಹುದ್ದೆಯನ್ನೇ ತೋರಿಸದೆ ಬದಲಿಸುವ ಸರ್ಕಾರ, ಬೇಕಾದವರನ್ನು ಆಯಕಟ್ಟಿನ ಹುದ್ದೆಗಳಿಗೆ ನಿಯೋಜಿಸುತ್ತಿದೆ ಎಂಬ ಅಸಮಾಧಾನ ಹಲವು ಅಧಿಕಾರಿಗಳಲ್ಲಿದೆ. ಕೆಲವರ ಬಳಿ ಇರುವ ‘ಹೆಚ್ಚುವರಿ’ ಹೊಣೆಗಳು ಇಂಥ ಅನುಮಾನಗಳಿಗೆ ಪುಷ್ಟಿ ನೀಡುತ್ತಿವೆ.

ಸರ್ಕಾರ, ಮುಖ್ಯಮಂತ್ರಿ ಬದಲಾಗುತ್ತಿದ್ದಂತೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌ ವೃಂದದ ಅಧಿಕಾರಿಗಳ ಸ್ಥಾನವೂ ಪಲ್ಲಟವಾಗುತ್ತದೆ. ಕೆಲವು ಅಧಿಕಾರಿಗಳು ಎಲ್ಲ ಕಾಲಕ್ಕೂ ಸಲ್ಲುವುದು ‘ಲಾಭಕಟ್ಟಿ’ನ ವಿಶೇಷ.

ರಾಜ್ಯದಲ್ಲಿ ಮಂಜೂರಾದ ಒಟ್ಟು 314 ಐಎಎಸ್‌ ಹುದ್ದೆಗಳಿವೆ. ಈ ಪೈಕಿ, 35ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರದ ‘ನಿಯುಕ್ತಿ’ (ಡಿಪಿಎಆರ್‌– ಸರ್ವೀಸಸ್‌) ವೆಬ್‌ಸೈಟ್‌ನಲ್ಲಿ 270 ಐಎಎಸ್‌ ಅಧಿಕಾರಿಗಳು ಬಗ್ಗೆ ಸಮಗ್ರ ಮಾಹಿತಿಯಿದೆ. ಅದರ ಪ್ರಕಾರ, 26 ಐಎಎಸ್‌ ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದಾರೆ. ಐವರು ರಜೆಯಲ್ಲಿದ್ದಾರೆ. 12 ಅಧಿಕಾರಿಗಳು ತರಬೇತಿಯಲ್ಲಿದ್ದಾರೆ.

ರಾಕೇಶ್‌ ಸಿಂಗ್‌, ರಜನೀಶ್‌ ಗೋಯಲ್‌, ಗೌರವ್‌ ಗುಪ್ತ, ಉಮಾ ಮಹದೇವನ್‌, ಎನ್‌. ಜಯರಾಮ್, ಜಿ.ಸಿ. ಪ್ರಕಾಶ್‌, ಕೆ. ಹರೀಶ್‌ ಕುಮಾರ್‌ ಅವರ ಬಳಿ ತಲಾ ಮೂರು ಹುದ್ದೆಗಳಿವೆ. ಜಾವೇದ್‌ ಅಖ್ತರ್‌, ವಿ. ಮಂಜುಳಾ, ಸೆಲ್ವ ಕುಮಾರ್‌, ಅಂಜುಂ ಪರ್ವೇಜ್‌, ಟಿ.ಕೆ. ಅನಿಲ್‌ಕುಮಾರ್‌, ಎನ್‌. ಮಂಜುನಾಥ ಪ್ರಸಾದ್‌, ಅನ್ಬು ಕುಮಾರ್‌ ದಯಾನಂದ ಸೇರಿದಂತೆ 30ಕ್ಕೂ ಹೆಚ್ಚು ಐಎಎಸ್‌ ಅಧಿಕಾರಿಗಳ ಬಳಿ ಎರಡು ಹುದ್ದೆಗಳಿವೆ. ಕೆ.ಪಿ. ಮೋಹನ್‌ ರಾಜ್‌, ವಾಸಿ ರೆಡ್ಡಿ ವಿಜಯ ಜ್ಯೋತ್ಸ್ನಾ, ಶಿವಾನಂದ ಕಾಪಸಿ, ಟಿ. ವೆಂಕಟೇಶ್‌, ಎಸ್‌. ಪೂವಿತ ಅವರು ಹುದ್ದೆ ನಿರೀಕ್ಷೆಯಲ್ಲಿದ್ದಾರೆ. ಕಿರಿಯ ಶ್ರೇಣಿಯ ಐಎಎಸ್ ಅಧಿಕಾರಿಗಳ ಪೈಕಿ ಕೆಲವರು ಉಪ ವಿಭಾಗಾಧಿಕಾರಿ ಹುದ್ದೆಯಲ್ಲಿದ್ದರೆ, ಇನ್ನೂ ಕೆಲವರು ತರಬೇತಿಯಲ್ಲಿದ್ದಾರೆ.  

ಕೆಲವು ಅಧಿಕಾರಿಗಳು 2–3 ಮಹತ್ವದ ಹುದ್ದೆಗಳಲ್ಲಿರುವುದು ಇತರ ಕೆಲವು ಐಎಎಸ್‌ ಅಧಿಕಾರಿಗಳ ಕಣ್ಣು ಕೆಂಪಗಾಗಿಸಿದೆ. ಸರ್ಕಾರದ ಈ ನೀತಿಯ ವಿರುದ್ಧ ತಮ್ಮ ಮಧ್ಯೆ  ಮಾತನಾಡಿಕೊಳ್ಳುವ ಈ ಅಧಿಕಾರಿಗಳು, ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಲು ತಯಾರಿಲ್ಲ.

‘ಸರ್ಕಾರಗಳು ಬದಲಾದಾಗ ಅಧಿಕಾರಿಗಳ ಸ್ಥಾನಗಳಲ್ಲೂ ಬದಲಾಗುವುದು ಸಹಜ ಪ್ರಕ್ರಿಯೆ ಎಂಬಂತಾಗಿದೆ. ಕೆಲವರನ್ನು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಮುಂದುವರಿಸಿದರೆ, ಇನ್ನೂ ಕೆಲವರನ್ನು ಕೆಲವೇ ತಿಂಗಳಲ್ಲಿ ವರ್ಗಾವಣೆ ಮಾಡಲಾಗುತ್ತಿದೆ. ಜಾತಿ, ಆಯಕಟ್ಟಿನ ಹುದ್ದೆ, ‘ಆದಾಯ’ದ ಮೂಲ ಈ ಎಲ್ಲ ಅಂಶಗಳು ಅಧಿಕಾರಿಗಳ ವರ್ಗಾವಣೆಯಲ್ಲೂ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.

‘ಕೆಲವು ಅಧಿಕಾರಿಗಳು ಜಾತಿ ಬಲ, ಹಣ ಬಲದ ಮೂಲಕವೂ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಐಎಎಸ್‌ ಅಧಿಕಾರಿಗಳ ವಲಯದಲ್ಲಿ ಉತ್ತರ ಭಾರತ, ತಮಿಳುನಾಡು, ಆಂಧ್ರಪ್ರದೇಶ ಮೂಲದವರ ಬಣ ಎಂಬ ಲಾಬಿಯೂ ಬಲವಾಗಿದೆ. ತಮ್ಮವರನ್ನು ಮಹತ್ವದ ಹುದ್ದೆಗಳಿಗೆ ನಿಯೋಜಿಸಿಕೊಳ್ಳುವ ವಿಚಾರದಲ್ಲಿ ಈ ‘ಬಣ’ಗಳು ಕೆಲಸ ಮಾಡುತ್ತದೆ. ಅವರ ಮಧ್ಯೆ, ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ಪಡೆದವರು ಸ್ಥಿತಿ ಕೇಳುವವರಿಲ್ಲ’ ಎಂದು ಮತ್ತೊಬ್ಬ ಅಧಿಕಾರಿಯೊಬ್ಬರು ಹೇಳಿದರು.

‘ಸಚಿವರು, ಶಾಸಕರು ತಮ್ಮ ತಾಳಕ್ಕೆ ಕುಣಿಯುವಂಥ ಅಧಿಕಾರಿಗಳನ್ನು ಹುದ್ದೆಗಳಿಗೆ, ಕ್ಷೇತ್ರಗಳಿಗೆ ನೇಮಿಸಿಕೊಳ್ಳುವ ಪರಿಪಾಟ ಹಿಂದಿನಿಂದಲೂ ಇದೆ. ಆದರೆ, ಇತ್ತೀಚೆಗೆ ಇದು ಹೆಚ್ಚಿದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಇತ್ತೀಚೆಗೆ ನಿವೃತ್ತರಾದವರು: ಹಿರಿಯ ಐಎಎಸ್‌ ಅಧಿಕಾರಿಗಳಾಗಿದ್ದ ಐ.ಎಸ್‌.ಎನ್‌ ಪ್ರಸಾದ್‌, ಇ.ವಿ. ರಮಣರೆಡ್ಡಿ, ಕಪಿಲ್‌ ಮೋಹನ್‌, ಕುಮಾರ ನಾಯಕ್‌, ಎಂ.ಜಿ. ಹಿರೇಮಠ, ಶಿವಯೋಗಿ ಕಳಸದ.

ಮುಂದಿನ ಸಿಎಸ್‌ ರಜನೀಶ್‌ ಗೋಯಲ್‌?

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅಧಿಕಾರ ಅವಧಿ ನ. 30ಕ್ಕೆ ಕೊನೆಯಾಗಲಿದೆ. ನ. 30 ಸರ್ಕಾರಿ ರಜಾ ದಿನ ಆಗಿರುವುದರಿಂದ 29ರಂದೇ ಅವರು ನಿವೃತ್ತರಾಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಎಸಿಎಸ್‌ ಆಗಿರುವ ರಜನೀಶ್‌ ಗೋಯಲ್‌ ಅವರು ಸೇವಾ ಜ್ಯೇಷ್ಠತೆ ಆಧಾರದಲ್ಲಿ ಈ ಹುದ್ದೆಗೆ ನಿಯೋಜನೆಗೊಳ್ಳುವುದು ಖಚಿತ. ಅವರ ಅಧಿಕಾರಾವಧಿ ಕೇವಲ ಏಳು ತಿಂಗಳು. ಗೋಯಲ್‌ ನಿವೃತ್ತಿಯಿಂದ ತೆರವಾದ ಹುದ್ದೆಗೆ ಅವರ ಪತ್ನಿ, ಸದ್ಯ ಅಭಿವೃದ್ಧಿ ಆಯುಕ್ತೆ ಆಗಿರುವ ಶಾಲಿನಿ ರಜನೀಶ್‌ ನೇಮಕಗೊಳ್ಳಲಿದ್ದಾರೆ. ಆ ಮೂಲಕ, ರಾಜ್ಯದ ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಪತಿಯ ನಂತರ ಪತ್ನಿ ವಹಿಸಿಕೊಳ್ಳುವುದು ಎರಡನೇ ಬಾರಿ ಆಗಲಿದೆ. 2000ರ ಡಿಸೆಂಬರ್‌ನಲ್ಲಿ ಬಿ.ಕೆ. ಭಟ್ಟಾಚಾರ್ಯ ಅವರ ನಂತರ ಅವರ ಪತ್ನಿ ಥೆರೇಸಾ ಭಟ್ಟಾಚಾರ್ಯ ಅವರು ಸಿಎಸ್‌ ಆಗಿದ್ದರು.

ಕೇಂದ್ರ ಸೇವೆಗೆ ‘ಗುಳೆ’

ತಮ್ಮ ಕೆಲಸಗಳ ಮೂಲಕವೇ ಜನರ ಮಧ್ಯೆ ಗುರುತಿಸಿಕೊಂಡ ಹಲವು ಐಎಎಸ್‌ ಅಧಿಕಾರಿಗಳು ಕೇಂದ್ರ ಸರ್ಕಾರದ ಸೇವೆಗೆ ತೆರಳಿದ್ದಾರೆ.

ಸುಬೋದ್‌ ಯಾದವ್‌, ಹರ್ಷ ಗುಪ್ತಾ, ಅನಿಲ್‌ ಕುಮಾರ್‌ ಝಾ, ಅಜಯ್ ಸೇಠ್‌, ಅತುಲ್‌ ಕುಮಾರ್‌ ತಿವಾರಿ, ನಿಲಯ ಮಿತಾಶ್‌, ಅರವಿಂದ್‌ ಶ್ರೀವಾಸ್ತವ, ಎಂ. ಮಹೇಶ್ವರ ರಾವ್, ರಿತ್ವಿಕ್‌ ರಂಜನ್‌ ಪಾಂಡೆ, ಪಿ. ಹೇಮಲತಾ, ವಿ. ಪೊನ್ನುರಾಜ್‌, ದರ್ಪಣ್‌ ಜೈನ್‌, ಸಮೀರ್‌ ಶುಕ್ಲಾ, ಕೆ.ಜಿ. ಜಗದೀಶ್‌, ವಿಪುಲ್‌ ಬನ್ಸಾಲ್‌, ಬಗಾದಿ ಗೌತಮ್‌, ಎಸ್‌.ಎಸ್‌. ನಕುಲ್, ಕೆ.ಬಿ. ಶಿವಕುಮಾರ್, ಅಭಿರಾಮ್‌ ಜಿ. ಶಂಕರ್‌, ಅನಿರುದ್ಧ ಶ್ರವಣ್‌, ಚಾರುಲತಾ ಸೋಮಲ್‌ ಮುಂತಾದವರು ಕೇಂದ್ರದಲ್ಲಿ ವಿವಿಧ ಹುದ್ದೆಗಳಲ್ಲಿದ್ದಾರೆ. ಕೇಂದ್ರ ಸೇವೆಗೆ ತೆರಳಿದ ಕೆಲವರು ಮರಳಿ ರಾಜ್ಯ ಸೇವೆಗೆ ಒಲವು ತೋರಿಸುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT