ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಲ್ಲಿ ಹುಡ್ಗರಿಗೆ ಹುಡ್ಗೀರೇ ಸಿಗ್ತಿಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

Last Updated 7 ಮಾರ್ಚ್ 2020, 3:11 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರದ ‘ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆ ಉತ್ತಮ ಕೆಲಸ, ನಮ್ಮಲ್ಲಿ ಅದೆಷ್ಟೋ ಯುವತಿಯರಿಗೆ ದುಡ್ಡು ಇಲ್ಲದ ಕಾರಣ ಮದುವೆಯೇ ಆಗಿಲ್ಲ..’ ಎಂದು ಜಯಮಾಲಾ ಹೇಳುತ್ತಿದ್ದಂತೆಯೇ, ‘ನಮ್ಮಲ್ಲಿ ಹುಡ್ಗರಿಗೆ ಹುಡ್ಗೀರೇ ಸಿಗ್ತಿಲ್ಲ... ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದಾಗ ನಗೆಯ ಅಲೆ ಎದ್ದಿತು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವಗೊತ್ತುವಳಿ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ ಈ ಸ್ವಾರಸ್ಯಕರ ಚರ್ಚೆ ನಡೆಯಿತು.

ಟಿ.ಎ.ಶರವಣ ಅವರು ‘ಸಪ್ತಪದಿ’ ಯೋಜನೆಯ ಬಗ್ಗೆ ಪ್ರಸ್ತಾಪಿಸಿ, ‘ಭಕ್ತರು ಭಕ್ತಿಯಿಂದ ದೇವಸ್ಥಾನಕ್ಕೆ ನೀಡಿದ ದುಡ್ಡನ್ನು ದೇವಸ್ಥಾನದ ಅಭಿವೃದ್ಧಿಗೇ ಬಳಸಬೇಕೇ ಹೊರತು ಸಾಮೂಹಿಕ ವಿವಾಹಕ್ಕೆ ಬಳಸಬಾರದು, ಭಕ್ತರ ದುಡ್ಡಲ್ಲಿ ಸರ್ಕಾರ ತಾನೇ ದುಡ್ಡು ಖರ್ಚು ಮಾಡಿದ್ದು ಎಂದು ಹೇಳಿಕೊಂಡು ಪ್ರಚಾರ ಗಿಟ್ಟಿಸುತ್ತಿದೆ’ ಎಂದರು.

ಶರವಣ ಅವರ ಮಾತನ್ನು ವಿರೋಧಿಸಿದ ಜಯಮಾಲಾ, ದುಡ್ಡಿಲ್ಲ ಎಂಬ ಕಾರಣಕ್ಕೆ ಅದೆಷ್ಟೋ ಮದುವೆಯಾಗದ ಯುವತಿಯರ ಪಾಲಿಗೆ ಇದು ಆಶಾಕಿರಣ, ಸ್ಥಳದಲ್ಲೇ ನೋಂದಣಿ ಮಾಡುವ ವ್ಯವಸ್ಥೆಯನ್ನೂ ಮಾಡಬೇಕು ಎಂದರು. ಈ ಹಂತದಲ್ಲಿ ಮಾಧುಸ್ವಾಮಿ ಅವರು ಯುವಕರಿಗೆ ಹೆಣ್ಣು ಸಿಗದೆ ಇರುವುದನ್ನು ಉಲ್ಲೇಖಿಸಿದರು. ಸಚಿವ ಸಿ.ಟಿ.ರವಿ ಸಹ ಇದೇ ಮಾತನ್ನು ಆಡಿದರು.

‘ರಾಜ್ಯದ 190 ‘ಎ’ ಗ್ರೇಡ್‌ ದೇವಸ್ಥಾನಗಳ ಪೈಕಿ 100 ದೇವಸ್ಥಾನಗಳಲ್ಲಿ ಮಾತ್ರ ಈ ಸಾಮೂಹಿಕ ವಿವಾಹ ವ್ಯವಸ್ಥೆ ಕಲ್ಪಿಸಲಾಗಿದೆ. 1 ಸಾವಿರ ಜೋಡಿ ವಿವಾಹದ ಚಿಂತನೆ ನಡೆಸಲಾಗಿತ್ತು, 2 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ. ಜನರ ದುಡ್ಡು ಜನರ ಕಲ್ಯಾಣಕ್ಕೆ ಸಿಗಬೆಕು ಎಂಬ ಚಿಂತನೆಯಲ್ಲಿ ಈ ಯೋಜನೆ ರೂಪಿಸಲಾಗಿದೆ ’ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿ ಚರ್ಚೆಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT