ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯೂಡಿ: ಎಇಯಿಂದ ಎಇಇ ಬಡ್ತಿ– ಮೀಸಲಾತಿ ಉಲ್ಲಂಘನೆ ಆರೋಪ

Published 28 ಜೂನ್ 2023, 16:48 IST
Last Updated 28 ಜೂನ್ 2023, 16:48 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಸಹಾಯಕ ಎಂಜಿನಿಯರ್‌ (ಎಇ) ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಹುದ್ದೆಗೆ ಮುಂಬಡ್ತಿ ನೀಡುವ ಉದ್ದೇಶದಿಂದ ಸಿದ್ಧಪಡಿಸಿದ ಪಟ್ಟಿಯಲ್ಲಿ ಮೀಸಲಾತಿ ಅಳವಡಿಸಿಲ್ಲ. ಇದರಿಂದ ಹಲವರು ಮುಂಬಡ್ತಿ ಅವಕಾಶದಿಂದ ವಂಚಿತರಾಗುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ದೂರಿದೆ.

ಈ ಬಗ್ಗೆ ಪಿಡಬ್ಲ್ಯೂಡಿ ಸಚಿವ ಸತೀಶ ಜಾರಕಿಹೊಳಿ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿರುವ ಸಂಘ, ‘ಮುಂಬಡ್ತಿ ನೀಡುವ ಉದ್ದೇಶದಿಂದ ತರಬೇತಿಗೆ ನಿಯೋಜಿಸುವ ವೇಳೆ ಮೀಸಲಾತಿ ರೋಸ್ಟರ್‌ ಅಳವಡಿಸಿಲ್ಲ. ಮೀಸಲಾತಿ ಅಳವಡಿಸಿ ಮುಂಬಡ್ತಿ ನೀಡಬೇಕು’ ಎಂದು ಆಗ್ರಹಿಸಿದೆ.

‘ಎಇಯಿಂದ ಎಇಇ ವೃಂದಕ್ಕೆ ನಿಯಮ 32ರ ಅಡಿ ಸ್ವತಂತ್ರ ಪ್ರಭಾರ ನೀಡಲು (ಮುಂಬಡ್ತಿ) ಅರ್ಹರಾದವರಿಗೆ ಎರಡು ದಿನಗಳ ತರಬೇತಿ ನೀಡಲು ಸೂಚಿಸಲಾಗಿದೆ. ಅರ್ಹರ ಪಟ್ಟಿ ತಯಾರಿಸುವ ವೇಳೆಯಲ್ಲಿ  ಜ್ಯೇಷ್ಠತಾ ಪಟ್ಟಿಯಲ್ಲಿ ಮೆರಿಟ್‌ನಲ್ಲಿರುವವರನ್ನು ಹೊರತುಪಡಿಸಿ, ಮೀಸಲಾತಿ ಅಡಿಯಲ್ಲಿ ಇತರ ಎಸ್‌ಸಿ, ಎಸ್‌ಸಿ ವರ್ಗದ ಎಂಜಿನಿಯರ್‌ಗಳನ್ನು ಆಯ್ಕೆ ಮಾಡಿಲ್ಲ. ಮೀಸಲಾತಿ ನೀಡುವ ವೇಳೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಮನವಿಯಲ್ಲಿ ತಿಳಿಸಿದ್ದಾರೆ.

‘ಬ್ಯಾಕ್‌ಲಾಗ್‌ ಹುದ್ದೆಯಲ್ಲಿ ನೇಮಕ ಆದವರನ್ನು ಲೆಕ್ಕ ಹಾಕಿ ಎಸ್‌ಸಿ, ಎಸ್‌ಟಿ ಪ್ರಾತಿನಿಧ್ಯವಿದೆ ಎಂಬ ಕಾರಣಕ್ಕೆ ಮೀಸಲಾತಿ ಅಳವಡಿಸದಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ. ಹೀಗಾಗಿ, ಅಂಥ ಹುದ್ದೆಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಹುದ್ದೆಗಳಿಗೆ ಕಡ್ಡಾಯವಾಗಿ ಮೀಸಲಾತಿ ರೋಸ್ಟರ್‌ ಅಳವಡಿಸಿ ಮುಂಬಡ್ತಿ ನೀಡಬೇಕು. ಸುಮಾರು 70 ಎಂಜಿನಿಯರ್‌ಗಳ ಪಟ್ಟಿಯಲ್ಲಿ ಕಡ್ಡಾಯವಾಗಿ ಮೀಸಲಾತಿ ಪಾಲಿಸಲೇಬೇಕು’ ಎಂದೂ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT