ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ದಾಳಿ: 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರ ಬಂಧನ

Published 8 ನವೆಂಬರ್ 2023, 16:23 IST
Last Updated 8 ನವೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಸೇರಿದಂತೆ ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು 10 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದಾರೆ.

ದೇಶದ ಗಡಿಭಾಗದಲ್ಲಿ ಮಧ್ಯವರ್ತಿಗಳ ಮೂಲಕ ಅಕ್ರಮವಾಗಿ ದೇಶ ಪ್ರವೇಶಿಸಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ವಿವಿಧೆಡೆ ವಾಸವಾಗಿದ್ದ ಬಾಂಗ್ಲಾ ವಲಸಿಗರ ಮೇಲೆ ಈ ದಾಳಿ ನಡೆದಿದೆ.

ಕರ್ನಾಟಕ ಸೇರಿದಂತೆ 10 ರಾಜ್ಯಗಳ 44 ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು. ಬಂಧಿತರಿಂದ ಮೊಬೈಲ್‌, ಸಿಮ್‌ ಕಾರ್ಡ್‌, ಪೆನ್‌ ಡ್ರೈವ್‌, ದಾಖಲೆ ಪತ್ರ, ಆಧಾರ್‌ ಕಾರ್ಡ್‌ಗಳು ಹಾಗೂ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ನಕಲಿ ಆಧಾರ್‌ ಕಾರ್ಡ್‌ ಮಾಡಿಸಿಕೊಂಡು ವಿವಿಧೆಡೆ ನೆಲೆಸಿದ್ದರು ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ ಬುಧವಾರ ಒಟ್ಟು 15 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದೆ. ಸೋಲದೇವನಹಳ್ಳಿ, ಕೆ.ಆರ್‌.ಪುರ, ಬೆಳ್ಳಂದೂರು, ಬೈಯಪ್ಪನಹಳ್ಳಿ, ಗ್ರಾಮಾಂತರ ಭಾಗದ ದೊಡ್ಡಬಳ್ಳಾಪುರ, ಹೊಸಕೋಟೆ, ಆನೇಕಲ್‌ನಲ್ಲಿ ದಾಳಿ ನಡೆಸಿ ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.

ಇತ್ತೀಚೆಗೆ ಅಕ್ರಮ ಬಾಂಗ್ಲಾ ವಲಸಿಗರು ಮಾನವ ಕಳ್ಳಸಾಗಾಣಿಕೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಬಂಧ ಬೆಂಗಳೂರು ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಹಾಗೂ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಬಾಂಗ್ಲಾ ವಲಸಿಗರು ನೆಲೆಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಕಳ್ಳ ಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಬಂದಿತ್ತು. ಶೋಧ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಮುಂದುವರಿಕೆ: ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರದ ಕೆಲವು ಪ್ರದೇಶಗಳಲ್ಲಿ ಬಾಂಗ್ಲಾದೇಶದಿಂದ ಬಂದವರು ನೆಲೆಸಿದ್ದಾರೆ. ಚಿಂದಿ ಆಯುವ, ಆಟಿಕೆ ವಸ್ತು ತಯಾರಿಕೆ ಹಾಗೂ ಮಾರಾಟ ನಡೆಸುತ್ತಿದ್ದಾರೆ. ಕೆಲವು ಕಂಪನಿಗಳಲ್ಲಿ ಪಶ್ಚಿಮಬಂಗಾಳ ರಾಜ್ಯದವರು ಎಂದು ಹೇಳಿಕೊಂಡು ಕೆಲಸಕ್ಕೆ ಸೇರಿಕೊಂಡಿದ್ದರು. ಅವರ ದಾಖಲೆ ಪರಿಶೀಲಿಸಲಾಗುವುದು. ಅಕ್ರಮ ವಲಸಿಗರು ಎಂಬುದು ಕಂಡುಬಂದರೆ ಬಂಧಿಸಲಾಗುವುದು. ಸದ್ಯ ಬಂಧಿಸಿರುವ 10 ಮಂದಿ ವಿಚಾರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT