ಬೆಂಗಳೂರು: ‘ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಕಳಪೆ ಕಾಮಗಾರಿ ನಡೆಸಿದ ಮತ್ತು ಕಾರ್ಯಾದೇಶ ಇಲ್ಲದೆ ಗುತ್ತಿಗೆದಾರರಿಗೆ ಸರ್ಕಾರದ ಹಣವನ್ನು ಅನಧಿಕೃತವಾಗಿ ವರ್ಗಾಯಿಸಿದ ಪ್ರಕರಣದ ವಿಚಾರಣೆಗೆ ಆದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ಕಾರ್ಕಳ ತಾಲ್ಲೂಕಿನ ನಲ್ಲೂರು ಗ್ರಾಮದ ಕೃಷ್ಣ ಎ.ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ‘ಈ ಪ್ರಕರಣದ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಲಾಗದು’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿ ಆದೇಶಿಸಿತು.