ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎ ನಿವೇಶನ ಹಂಚಿಕೆಯಲ್ಲಿಯೂ ವ್ಯಾಪಕ ಅಕ್ರಮ: ಛಲವಾದಿ ನಾರಾಯಣಸ್ವಾಮಿ ಆರೋಪ

Published 28 ಆಗಸ್ಟ್ 2024, 12:45 IST
Last Updated 28 ಆಗಸ್ಟ್ 2024, 12:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಲೋಕಸಭಾ ಚುನಾವಣೆಗೂ ಮುನ್ನ 12 ಜಿಲ್ಲೆಗಳ ಕೈಗಾರಿಕಾ ಪ್ರದೇಶಗಳಲ್ಲಿ ಸಿ.ಎ (ನಾಗರೀಕ ಸೌಲಭ್ಯ) ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಇದರಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

‘ಈ ಅಕ್ರಮದಿಂದ ಸರ್ಕಾರಕ್ಕೆ ಸುಮಾರು ₹1,000 ಕೋಟಿ ನಷ್ಟವಾಗಿದೆ’ ಎಂದು ಛಲವಾದಿ ನಾರಾಯಣಸ್ವಾಮಿ ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಇದಕ್ಕೆ ಪೂರಕ ದಾಖಲೆಗಳನ್ನೂ ಅವರು ಬಿಡುಗಡೆ ಮಾಡಿದರು.

‘12 ಜಿಲ್ಲೆಗಳಲ್ಲಿ ಒಟ್ಟು 193 ಸಿ.ಎ ನಿವೇಶನಗಳಿದ್ದವು. ಇವುಗಳ ಒಟ್ಟು ವಿಸ್ತೀರ್ಣ 377.69 ಎಕರೆ. ಇದಕ್ಕಾಗಿ 283 ಅರ್ಜಿಗಳು ಬಂದಿದ್ದವು. 30 ದಿನಗಳ ಕಾಲಾವಕಾಶ ನೀಡಿದ್ದರೆ ಇನ್ನಷ್ಟು ಅರ್ಜಿಗಳು ಬರುತ್ತಿದ್ದವು. ಆದರೆ, ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದೇ ಜನರ ಗಮನಕ್ಕೆ ಬರಲಿಲ್ಲ. ಎಲ್ಲವನ್ನೂ ಗುಟ್ಟಾಗಿ ಮಾಡಿದ್ದಾರೆ. ಹಿಂದೆಲ್ಲ ಆನ್‌ಲೈನ್‌ ಮೂಲಕ ಈ ಪ್ರಕ್ರಿಯೆ ನಡೆಯುತ್ತಿತ್ತು. ಈ ಬಾರಿ ಆನ್‌ಲೈನ್‌ ಬಳಕೆ ಮಾಡಲಿಲ್ಲ. 14 ದಿನಗಳಲ್ಲಿ ಅರ್ಜಿ ಸ್ವೀಕರಿಸಿ, 15ನೇ ದಿನ ಪರಿಶೀಲಿಸಿ, 16ನೇ ದಿನವೇ ಮಂಜೂರಾತಿ ಮಾಡಲಾಗಿದೆ’ ಎಂದು ಹೇಳಿದರು.

ಸ್ಟಾರ್‌ ಹೋಟೆಲ್‌, ಅಪಾರ್ಟ್‌ಮೆಂಟ್‌ಗೂ ಸಿಎ ನಿವೇಶನ

‘ವಿಜಯಪುರದ ಹಲಗನಿಯ ಈಶ್ವರ ಸಂಗಪ್ಪ ಬದ್ರಿ ಅವರ ‘ತ್ರೀಸ್ಟಾರ್‌ ಹೋಟೆಲ್‌’ಗೆ ಸಿ.ಎ ನಿವೇಶನ ಕೊಡಲಾಗಿದೆ. ಇದು ವಾಣಿಜ್ಯ ಉದ್ದೇಶದ್ದಾಗಿದ್ದು, ನಿವೇಶನ ಏಲಂ ಮಾಡಬೇಕಿತ್ತು. ವಾಣಿಜ್ಯ ಉದ್ದೇಶದ ಜಮೀನು 2.5 ಎಕರೆಗೆ ದುಪ್ಪಟ್ಟು ದರ ಕನಿಷ್ಠ  ₹12.5 ಕೋಟಿಗೆ ನಿಗದಿ ಮಾಡಬೇಕಿತ್ತು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗುತ್ತಿತ್ತು’ ಎಂದು ನಾರಾಯಣಸ್ವಾಮಿ ಹೇಳಿದರು.

‘ಬಿಡದಿಯಲ್ಲಿ ಸುನಿತಾ ರಾಜಶೇಖರ್ ಎಂಬುವರಿಗೆ ಅಪಾರ್ಟ್‌ಮೆಂಟ್‌ ನಿರ್ಮಿಸಲು ಸಿ.ಎ ನಿವೇಶನ ಮಂಜೂರು ಮಾಡಲಾಗಿದೆ. ಅಪಾರ್ಟ್‌ಮೆಂಟ್‌ ನಿರ್ಮಾಣ ಸಿ.ಎ ಸೌಲಭ್ಯದಡಿ ಬರುವುದೇ ಅಥವಾ ವಾಣಿಜ್ಯ ಉದ್ದೇಶದಡಿ ಬರುತ್ತದೆಯೆ ಎಂಬುದನ್ನು ಸಾರ್ವಜನಿಕರಿಗೆ ಸರ್ಕಾರ ಸ್ಪಷ್ಟಪಡಿಸಬೇಕು. ಹಾರೋಹಳ್ಳಿಯಲ್ಲಿ ಸ್ಕಿಲ್‌ ಡೆವಲಪ್‌ಮೆಂಟ್ ಸಂಸ್ಥೆಗೆ 2.5 ಎಕರೆ ಕೊಟ್ಟಿದ್ದಾರೆ. ಪರಿಶಿಷ್ಟರ ಅರ್ಜಿದಾರರಿಗೆ ಕೇವಲ ಕಾಲು ಎಕರೆ ಜಾಗ ಕೊಟ್ಟಿರುವ ಉದಾಹರಣೆಯೂ ಇದೆ’ ಎಂದರು.

‘ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಒಬ್ಬರೇ ಅರ್ಜಿದಾರರಿಗೆ ತಲಾ ಮೂರು ಸಿ.ಎ ನಿವೇಶನಗಳನ್ನು ನೀಡಲಾಗಿದೆ. ಇವರು ಪ್ರಭಾವಿ ಆಗಿರುವುದರಿಂದಲೇ ತಲಾ ಮೂರು ನಿವೇಶನಗಳನ್ನು ವಿತರಿಸಲಾಗಿದೆ’ ಎಂದು ಆರೋಪಿಸಿದರು.

‘ಕೈಗಾರಿಕಾ ಪ್ರದೇಶದ ಸಿ.ಎ ನಿವೇಶನಗಳಿಗಾಗಿ ಪರಿಶಿಷ್ಟ ಜಾತಿಗೆ ಸೇರಿದ 72 ಮಂದಿ 2– 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರು. ಕೆಐಎಡಿಬಿ ಅವರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದೆ. ಆದರೆ, ಖರ್ಗೆ ಕುಟುಂಬಕ್ಕೆ ನಿಯಮಗಳನ್ನು ಬದಿಗೊತ್ತಿ ಕೆಲವೇ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಿದೆ. ಉಳಿದ ದಲಿತ ಅರ್ಜಿದಾರರಿಗೆ ಇನ್ನೂ ಜಮೀನು ನೀಡಿಲ್ಲ’ ಎಂದು ದೂರಿದರು.

‘ಕೌಶಲ್ಯ ಅಭಿವೃದ್ಧಿ ಕೇಂದ್ರ ಮಾಡಿ ಯುವಕರಿಗೆ ಉದ್ಯೋಗ ನೀಡುವುದು ತಪ್ಪಾ ಎಂದು ಸಚಿವ ಪ್ರಿಯಾಂಕ ಖರ್ಗೆ ಕೇಳಿದ್ದಾರೆ. ಆದರೆ, ಅವರದೇ ಟ್ರಸ್ಟ್‌ ಕಲಬುರಗಿಯಲ್ಲಿ 19 ಎಕರೆ ಬಳಸಿಕೊಂಡು ವಿಶ್ವವಿದ್ಯಾಲಯದ ಜಾಗದಲ್ಲಿ ತರಬೇತಿ ಕೇಂದ್ರ ತೆರೆದಿದೆ. ಅಲ್ಲಿ ಒಂದು ಕಟ್ಟಡವೂ ನಿರ್ಮಾಣವಾಗಿದೆ. ಆದರೆ, ಟ್ರಸ್ಟ್‌ನವರು ಎಷ್ಟು ಯುವಕರಿಗೆ ತರಬೇತಿ ನೀಡಿದ್ದಾರೆ ಎಂಬುದು ಬಹಿರಂಗಪಡಿಸಬೇಕು. ನನಗಿರುವ ಮಾಹಿತಿ ಪ್ರಕಾರ ಅಲ್ಲಿ ಒಬ್ಬರಿಗೂ ಪ್ರವೇಶ ನೀಡಿಲ್ಲ’ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT