ಚಿತ್ರದುರ್ಗ: ‘ಲಿಂಗಾಯತ ಹಾಗೂ ಇಸ್ಲಾಂ ಧರ್ಮಗಳು ಬೇರೆಬೇರೆಯಾಗಿದ್ದರೂ ಎರಡೂ ಧರ್ಮಗಳ ನಡುವೆ ಕೆಲವು ವಿಚಾರಗಳಲ್ಲಿ ಸಮಾನ ಅಂಶಗಳಿವೆ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ನಡೆದ ಕುರಾನ್ ಪ್ರವಚನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಲಿಂಗಾಯತ ಧರ್ಮ ಬಹುದೇವತಾ ಆರಾಧನೆಯನ್ನು ನಿರಾಕರಣೆ ಮಾಡುತ್ತದೆ, ಮೂರ್ತಿ ಪೂಜೆಯನ್ನು ಅಲ್ಲಗಳೆಯುತ್ತದೆ. ಇಷ್ಟಲಿಂಗ ಪೂಜೆಯನ್ನು ನಿಷ್ಠೆಯಿಂದ ಮಾಡಬೇಕು ಎಂದು ಹೇಳುತ್ತದೆ. ಹಾಗೆಯೇ ಮೊಹಮ್ಮದ್ ಪೈಗಂಬರ್ ಅವರೂ ಇದನ್ನೇ ಹೇಳಿದ್ದಾರೆ. ಸ್ಥಾವರಗಳ ಪೂಜೆ ಬೇಡ, ಮೂರುತಿಗಳ ಗೊಡವೆ ಬೇಡ, ಅಲ್ಲಾಹು ಒಬ್ಬನನ್ನು ಧ್ಯಾನಿಸು ಎಂದು ಹೇಳಿದ್ದಾರೆ’ ಎಂದರು.
‘ದೇವನೊಬ್ಬ ನಾಮ ಹಲವು ಎಂಬ ಸತ್ಯವನ್ನು ಎಲ್ಲರೂ ಹೇಳಿದ್ದಾರೆ. ಆದರೂ ನಾವು ಮನುಷ್ಯ ಮನುಷ್ಯನ ನಡುವೆ ಗೋಡೆಗಳನ್ನು ಕಟ್ಟುತ್ತಿದ್ದೇವೆ, ಬೇಲಿಗಳನ್ನು ಸೃಷ್ಟಿ ಮಾಡುತ್ತಿದ್ದೇವೆ. ವಿಚಾರವಂತರು, ನೀತಿವಂತರು ಗೋಡೆಗಳನ್ನು ಕೆಡವಿ, ಬೇಲಿಗಳನ್ನು ಕಿತ್ತು ಹಾಕಿ ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯ ಶ್ರೀಮಂತಿಕೆಯನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.