ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಪ್ರಧಾನ ಕಚೇರಿ ಬೆಂಗಳೂರಿಗೇ ಬೇಕು: ಕೇಂದ್ರಕ್ಕೆ ನೌಕರರ ಒಕ್ಕೂಟದ ಮನವಿ

Last Updated 25 ಡಿಸೆಂಬರ್ 2019, 22:17 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಷನಲ್‌ ಇನ್ಶುರೆನ್ಸ್, ಓರಿಯಂಟಲ್‌ ಮತ್ತು ಯುನೈಟೆಡ್‌ ಇನ್ಶುರೆನ್ಸ್ ವಿಲೀನದ ಘೋಷಣೆಯು ಶೀಘ್ರದಲ್ಲಿಯೇ ಹೊರಬೀಳುವ ಸಾಧ್ಯತೆ ಇದ್ದು, ವಿಲೀನಗೊಂಡ ಬಳಿಕ ಅದರ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲೇ ಸ್ಥಾಪಿಸಬೇಕೆಂದು ಮೂರೂ ಕಂಪನಿಗಳ ನೌಕರರು, ಏಜೆಂಟರು ಮತ್ತು ಪಾಲಿಸಿದಾರರ ಒಕ್ಕೂಟವು ಬೇಡಿಕೆ ಇಟ್ಟಿದೆ.

ಈ ಸಂಬಂಧ ಸಂಸದ ಪಿ.ಸಿ.ಮೋಹನ್‌ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಮನವಿ ಪತ್ರ ಅರ್ಪಿಸಲು ಒಕ್ಕೂಟ ತೀರ್ಮಾನಿಸಿದೆ.

‘ಈ ಬೇಡಿಕೆಗೆ ರಾಜ್ಯ ಸರ್ಕಾರವೂ ಧ್ವನಿಗೂಡಿಸಬೇಕು ಮತ್ತು ಮುಖ್ಯಮಂತ್ರಿಯವರೂ ಈ ದಿಸೆಯಲ್ಲಿ ಪ್ರಯತ್ನ ನಡೆಸಬೇಕು. ಈ ಹಿಂದೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಸ್ಥಾಪನೆಯ ಅವಕಾಶ ಬೆಂಗಳೂರಿಗೆ ಒಲಿದು ಬಂದಿದ್ದರೂ ರಾಜಕೀಯ ಕಾರಣಗಳಿಗಾಗಿ ರಾಜ್ಯದ ಕೈ ತಪ್ಪಿ ಹೈದರಾಬಾದ್‌ ಪಾಲಾಯಿತು. ಈ ಬಾರಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸಂಘಟನೆಯ ಪ್ರಮುಖರೊಬ್ಬರು ತಿಳಿಸಿದ್ದಾರೆ.

‘ನಿರ್ಮಲಾ ಸೀತಾರಾಮನ್‌ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದರಿಂದ, ಕರ್ನಾಟಕದ ಪರವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಜ್ಯ ಬಿಜೆಪಿಯೂ ಅವರ ಮೇಲೆ ಒತ್ತಡ ಹೇರಬೇಕು’ ಎಂದೂ ಹೇಳಿದ್ದಾರೆ.

ಓರಿಯೆಂಟಲ್‌ ಇನ್ಶುರೆನ್ಸ್ ಕಂಪನಿಯ ಮುಖ್ಯ ಕಚೇರಿ ದೆಹಲಿಯಲ್ಲಿದೆ. ನ್ಯಾಷನಲ್‌ ಇನ್ಶುರೆನ್ಸ್ ಕೇಂದ್ರ ಕಚೇರಿ ಕೋಲ್ಕತ್ತ ಮತ್ತು ಯುನೈಟೆಡ್‌ ಇಂಡಿಯಾ ಇನ್ಶುರೆನ್ಸ್ ಕಂಪನಿ ಕೇಂದ್ರ ಕಚೇರಿ ಚೆನ್ನೈನಲ್ಲಿದೆ. ವಿಲೀನದ ಬಳಿಕ ರಚನೆಯಾಗುವ ಪ್ರಧಾನ ಕಚೇರಿಗೆ ಅದೇ ನಗರಗಳೂ ಲಾಬಿ ನಡೆಸುವ ಸಾಧ್ಯತೆ ಇದೆ. ಬೆಂಗಳೂರು ಜಾಗತಿಕ ಮಟ್ಟದ ನಗರವಾಗಿದ್ದು, ಈ ಮುಖ್ಯ ಕಚೇರಿಯ ಸ್ಥಾಪನೆಗೆ ಸೂಕ್ತ ಸ್ಥಳ ಎಂದು ಹೇಳಿದ್ದಾರೆ.

ಕಾರಣಗಳು ಹೀಗಿವೆ: ಬೆಂಗಳೂರಿನಲ್ಲಿ ವಿಮೆ ಕ್ಷೇತ್ರದ ಬೆಳವಣಿಗೆಗೆ ಅನುಕೂಲಕರ ವಾತಾವರಣ ಇದೆ. ಜತೆಗೆ, ವಿಶ್ವದಲ್ಲಿ ನಾಲ್ಕನೇ ಟೆಕ್‌ ಹಬ್‌ ಆಗಿರುವ ನಗರವು ಇನ್ನೊಂದು ವರ್ಷದಲ್ಲಿ ವಿಶ್ವದಲ್ಲಿ ನಂ. 1 ಸ್ಥಾನ ಪಡೆಯಲಿದೆ. 400 ಕ್ಕೂ ಅಧಿಕ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿವೆ. ಸರ್ಕಾರಿ ಸ್ವಾಮ್ಯದ ವಿಮೆ ಕಂಪನಿಗಳು ಖಾಸಗಿ ವಲಯದವಿಮೆ ಕಂಪನಿಗಳಿಗೆ ತೀವ್ರ ಪೈಪೋಟಿ ನೀಡಿ ಬೆಳೆಯಲು ಸಹಾಯಕವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT