ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

International Democracy Day: ರಾಜ್ಯದಾದ್ಯಂತ ಒಗ್ಗಟ್ಟಿನ ಮಾನವಸರಪಳಿ

Published : 15 ಸೆಪ್ಟೆಂಬರ್ 2024, 5:41 IST
Last Updated : 15 ಸೆಪ್ಟೆಂಬರ್ 2024, 5:41 IST
ಫಾಲೋ ಮಾಡಿ
Comments

ಬೆಂಗಳೂರು: ಅಂತರರಾಷ್ಟ್ರಿಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ರಾಜ್ಯ ಸರ್ಕಾರ ಆಯೋಜಿಸಿರುವ 25 ಲಕ್ಷ ಜನ ಒಳಗೊಳ್ಳುವ 2,500 ಕಿ.ಮೀ ಉದ್ದದ ಮಾನವ ಸರಪಳಿಗೆ ಬೀದರ್‌ನ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. 

ಮಾನವ ಸರಪಳಿಯುದ್ದಕ್ಕೂ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ಘೋಷಣೆ ಕೂಗಿದರು. ಕೆಲವು ಮಕ್ಕಳು ತಾಯಿ ಭುವನೇಶ್ವರಿ ಹಾಗೂ ಭಾರತಾಂಬೆಯ ವೇಷ‌ ಧರಿಸಿ ಗಮನ ಸೆಳೆದರು.

ಕೊಡಗು ವರದಿ: ಕೊಡಗು ಜಿಲ್ಲೆಯಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಮಾರು 77 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲಾಯಿತು. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಹಲವು ತುಂತುರು ಮಳೆಯಲ್ಲಿ ಪರಸ್ಪರ ಕೈಹಿಡಿದುಸರಪಳಿ ನಿರ್ಮಿಸಿದರು.

ಧಾರವಾಡ ವರದಿ: ಧಾರವಾಡ ಜಿಲ್ಲೆಯಲ್ಲಿ ಸುಮಾರು 50 ಕಿ.ಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಸಿಡಿ ಅವರಣದಲ್ಲಿ ವಿದ್ಯಾರ್ಥಿಗಳು ಭಾರತ ನಕ್ಷೆ ಆಕೃತಿಯ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.

ಬೆಳಗಾವಿ ವರದಿ: ಜಿಲ್ಲೆಯಲ್ಲಿ 145 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಯಿತು.ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿಯಿಂದ ಯರಗಟ್ಟಿ, ಹಲಕಿ ಕ್ರಾಸ್, ನೇಸರಗಿ, ಸಾಂಬ್ರಾ, ಬೆಳಗಾವಿ, ಹಿರೇಬಾಗೇವಾಡಿ, ಎಂ‌.ಕೆ.ಹುಬ್ಬಳ್ಳಿ ಮಾರ್ಗವಾಗಿ ಚನ್ನಮ್ಮನ ಕಿತ್ತೂರಿನವರೆಗೆ ಮಾನವ ಸರಪಳಿ ರಚಿಸಲಾಗಿದೆ.

ಕೊಪ್ಪಳ ವರದಿ: ಜಿಲ್ಲೆಯಲ್ಲಿ 53 ಸಾವಿರ ಜನರ ಮಾನವ ಸರಪಳಿ ಮೂಲಕ ಬೆಸೆಯಲಾಯಿತು. ಗ್ಯಾರಂಟಿ ಯೋಜನೆ ಫಲಾನುಭವಿಗಳು, ವಿದ್ಯಾರ್ಥಿಗಳು, ಎನ್‌ಜಿಒಗಳ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯನಗರ ವರದಿ: ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ 40 ಸಾವಿರಕ್ಕೂ ಅಧಿಕ ಮಂದಿ ಸುಮಾರು 40 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶ ಸಾರಿದರು. ಜೈ ಹಿಂದ್‌, ಜೈ ಕರ್ನಾಟಕ, ಜೈ ಭೀಮ್‌ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

ರಾಮನಗರ ವರದಿ: ಜಿಲ್ಲಾಧಿಕಾರಿ ಕಚೇರಿ ಎದುರು ಡಿ.ಸಿ ಯಶವಂತ್ ವಿ. ಗುರುಕರ್ ಭಾನುವಾರ ಚಾಲನೆ ನೀಡಿದರು. ಎಲ್ಲರೂ ಪರಸ್ಪರ ಕೈ ಹಿಡಿದು‌ ಮೇಲಕ್ಕೆತ್ತಿ ಪ್ರಜಾಪ್ರಭುತ್ವ ದಿನವನ್ನು ಸಂಭ್ರಮಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಓದಿದ ಸಂವಿಧಾನ ಪೀಠಿಕೆಯನ್ನು ಎಲ್ಲರೂ ಸಾಮೂಹಿಕವಾಗಿ ಪಠಿಸಿದರು. ಇದೇ ವೇಳೆ ನಾಡಗೀತೆ ಮೊಳಗಿತು.

ದಕ್ಷಿಣ ಕನ್ನಡ ವರದಿ: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಯಿಂದ ಸುಳ್ಯ ತಾಲ್ಲೂಕಿನ ಸಂಪಾಜೆ ಗಡಿಯವರೆಗೆ ಅಲ್ಲಲ್ಲಿ ಮಾನವ ಸರಪಳಿ ರಚಿಸಲಾಯಿತು. ಜಿಲ್ಲೆಯಲ್ಲಿ ಒಟ್ಟು 130 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಕ್ಕದಿಂದ ಕಣ್ಣೂರಿನವರಗೆ ಮಾನವ ಸರಪಳಿ ರಚಿಸಲಾಯಿತು.

ಮೈಸೂರು ವರದಿ: ಮೈಸೂರು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ‘ಮಾನವ ಸರಪಳಿ’ ರಚಿಸಲಾಯಿತು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಜನರು ‘ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಕಾಪಾಡುವುದಕ್ಕಾಗಿ ಪ್ರಜಾಪ್ರಭುತ್ವ ಬಲಪಡಿಸುತ್ತೇವೆ’ ಎಂಬ ಸಂದೇಶವನ್ನು ರವಾನಿಸಿದರು. ಕೈ–ಕೈ ಹಿಡಿದು ನಿಲ್ಲುವ ಮೂಲಕ ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು.

ಉಡುಪಿ ವರದಿ: ಜಿಲ್ಲೆಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಬೈಂದೂರಿನ ಶಿರೂರು ಗೇಟ್ ನಿಂದ ಕಾಪು ತಾಲ್ಲೂಕಿನ ಹೆಜಮಾಡಿ ಸೇತುವೆವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆ ಗಳ ಅಧಿಕಾರಿ ಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಕೈ ಕೈ ಹಿಡಿದು ಮಾನವ ಸರಪಳಿ ರಚಿಸಿದರು.

ಚಿಕ್ಕಮಗಳೂರು ವರದಿ: ಜಿಲ್ಲೆಯಲ್ಲಿ 92 ಕಿಲೋ ಮೀಟರ್ ಮಾನವ ಸರಪಳಿ ನಿರ್ಮಿಸಲಾಯಿತು. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಚಾಲನೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಎಲ್ಲರೂ ಪರಸ್ಪರ ಕೈ ಹಿಡಿದು‌ ಮೇಲಕ್ಕೆತ್ತಿ ಪ್ರಜಾಪ್ರಭುತ್ವ ದಿನವನ್ನು ಸಂಭ್ರಮಿಸಿದರು.

ಇದೊಂದು ವಿನೂತನ ಪ್ರಯೋಗವಾಗಿದ್ದು, ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಎಲ್ಲ ಜನರೂ ಒಟ್ಟಾಗಿ 2,500 ಕಿ.ಮೀ ಉದ್ದದವರೆಗೂ ಕೈಕೈ ಹಿಡಿದು ನಿಲ್ಲಲಿದ್ದಾರೆ. ಇದು ವಿಶ್ವದಾಖಲೆಯಾಗಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT