ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಾಂಡಾ ಅಭಿವೃದ್ಧಿ ನಿಗಮದಲ್ಲೂ ಅಕ್ರಮದ ಘಾಟು: ವ್ಯವಸ್ಥಾಪಕರ ವಿರುದ್ಧ ದೂರು

Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಅಧೀನದ ತಾಂಡಾ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣಕಾಸು ಅಕ್ರಮಗಳನ್ನು ನಡೆಸಿದ್ದಾರೆ ಎಂದು ನಿಗಮದ ಹಿಂದಿನ ಲೆಕ್ಕಾಧಿಕಾರಿಯೇ ಆಕ್ಷೇಪ ಎತ್ತಿದ್ದಾರೆ. ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆದು ಆರು ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ.

ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್‌. ಶಿವಶಂಕರ ನಾಯ್ಕ್‌ ಸರ್ಕಾರಿ ಅನುದಾನ ದುರ್ಬಳಕೆ, ಕಾಮಗಾರಿಗಳ ಅನುಮೋದನೆಯಲ್ಲಿ ಅಕ್ರಮ, ಫಲಾನುಭವಿಗಳಿಗೆ ಸಾಲ ಮತ್ತು ಸಹಾಯಧನ ವಿತರಿಸದೇ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಲೆಕ್ಕಾಧಿಕಾರಿ ಸುರೇಶ್‌ ನಾಯ್ಕ್‌ 2011ರ ನವೆಂಬರ್‌ 23ರಂದು ಪತ್ರ ಬರೆದಿದ್ದರು. ವ್ಯವಸ್ಥಾಪಕ ನಿರ್ದೇಶಕರಿಗೇ ದೂರು ಪತ್ರವನ್ನು ಸಲ್ಲಿಸಿದ್ದ ಲೆಕ್ಕಾಧಿಕಾರಿ, ಅದರ ಪ್ರತಿಯನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಯವರ ಕಚೇರಿಗೆ ರವಾನಿಸಿದ್ದರು.

ಶೌಚಾಲಯಕ್ಕೆ ತುಂಡು ಗುತ್ತಿಗೆ: ಸಂತ ಸೇವಾಲಾಲ್‌ ಜಯಂತಿ ಆಚರಣೆಯಲ್ಲಿ ಜೈವಿಕ ಶೌಚಾಲಯಗಳ ಬಳಕೆಗೆ ₹ 1.5 ಕೋಟಿ ವೆಚ್ಚ ಮಾಡಲಾಗಿತ್ತು. ಈ ಸೇವೆಯನ್ನು ಪಡೆಯಲು ಟೆಂಡರ್‌ ಆಹ್ವಾನಿಸಿರಲಿಲ್ಲ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ (ಕೆಟಿಪಿಪಿ) ಸೆಕ್ಷನ್‌ 4–ಜಿ ಅಡಿ ವಿನಾಯ್ತಿಯನ್ನೂ ಪಡೆಯದೆ ಬಿಲ್‌ಗಳನ್ನು ವಿಭಜಿಸಿ (ತುಂಡು ಗುತ್ತಿಗೆ) ಪಾವತಿಸುವ ಮೂಲಕ ವ್ಯವಸ್ಥಾಪಕ ನಿರ್ದೇಶಕರು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಪತ್ರದಲ್ಲಿದೆ.

ಲೆಕ್ಕಪರಿಶೋಧನೆಯಲ್ಲೂ ಅಕ್ರಮ: ಕಡಿಮೆ ವಹಿವಾಟು ನಡೆಸುವ ನಿಗಮವಾಗಿದ್ದರೂ ವಲಯ ಕಚೇರಿಗಳ ಲೆಕ್ಕಪರಿಶೋಧನೆ ಹೆಸರಿನಲ್ಲಿ ₹ 1 ಕೋಟಿ ಪಾವತಿಸಲಾಗಿದೆ.  ಯಾವುದೇ ವಲಯ ಕಚೇರಿಯಿಂದಲೂ ಲೆಕ್ಕಪರಿಶೋಧನಾ ವರದಿ ಸಲ್ಲಿಕೆಯಾಗಿಲ್ಲ. ಲೆಕ್ಕಪರಿಶೋಧನಾ ವರದಿ ಕುರಿತು ಮಾಹಿತಿ ಕೇಳಿದರೆ ಕರ್ತವ್ಯದಿಂದ ಬಿಡುಗಡೆ ಮಾಡುವುದಾಗಿ ಸಂಬಂಧಿಸಿದ ಶಾಖೆಯ ನೌಕರ ‍ಪ್ರಜ್ವಲ್‌ ಎಂಬುವವರಿಗೆ ವ್ಯವಸ್ಥಾಪಕ ನಿರ್ದೇಶಕರು ಬೆದರಿಸಿರುತ್ತಾರೆ ಎಂದೂ ಲೆಕ್ಕಾಧಿಕಾರಿ ದೂರಿದ್ದರು.

ಕಸೂತಿ ತರಬೇತಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರವು ಒದಗಿಸಿದ್ದ ₹ 2 ಕೋಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ಆದರೆ, ಕಸೂತಿ ತರಬೇತಿ ಕಾರ್ಯಕ್ರಮಕ್ಕೆ ಆ ಅನುದಾನವನ್ನು ಬಳಸಲಾಗಿದೆ ಎಂಬ ತಪ್ಪು ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂಬ ಉಲ್ಲೇಖವೂ ಇದೆ.

ಕಾಮಗಾರಿಗಳಲ್ಲೂ ಅವ್ಯವಹಾರ: ನಿಗಮದ ವತಿಯಿಂದ ಕೈಗೆತ್ತಿಕೊಂಡ ಕಾಮಗಾರಿಗಳ ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವಾಗ ನಿಯಮ ಪಾಲಿಸಿಲ್ಲ. ಲೆಕ್ಕಾಧಿಕಾರಿಯನ್ನು ಹೊರಗಿಟ್ಟು ಕಾರ್ಯನಿರ್ವಾಹಕ ಎಂಜಿನಿಯರ್‌ ಮೂಲಕ ಅನುಮೋದನೆ ಪಡೆಯಲಾಗಿದೆ. ಹಲವು ವರ್ಷಗಳಿಂದ ಅಪೂರ್ಣ ಸ್ಥಿತಿಯಲ್ಲಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಅನುದಾನ ಲಭ್ಯವಿಲ್ಲದಿದ್ದರೂ ಹೊ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂಬ ಆರೋಪವೂ ಇದೆ.

ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿದ್ದ ನಿಗಮದ ಕಚೇರಿಯನ್ನು ಬಂಜಾರ ಭವನಕ್ಕೆ ಸ್ಥಳಾಂತರ ಮಾಡುವಾಗಲೂ ಟೆಂಡರ್‌ ನಡೆಸದೇ ಬೃಹತ್‌ ಮೊತ್ತದ ಕಾಮಗಾರಿ ಕೈಗೊಂಡಿರುವುದರಲ್ಲೂ ನಿಯಮ ಉಲ್ಲಂಘನೆ ನಡೆದಿದೆ ಎಂದು ಲೆಕ್ಕಾಧಿಕಾರಿ ಆರೋಪಿಸಿದ್ದರು.

ಫಲಾನುಭವಿಗಳಿಗೆ ಹಣ ಬಿಡುಗಡೆಗೆ ನಿರ್ಲಕ್ಷ್ಯ

2021–22 ಮತ್ತು 2022–23ನೇ ಸಾಲಿನ ನೇರ ಸಾಲ ಯೋಜನೆ ಹಾಗೂ ಉದ್ಯಮಶೀಲತಾ ಯೋಜನೆಗಳ ಫಲಾನುಭವಿಗಳಿಗೆ ಹಣ ಪಾವತಿಸುವ ಕುರಿತು ಹಲವು ಬಾರಿ ಚರ್ಚಿಸಿದ್ದರೂ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕ್ರಮ ವಹಿಸಿಲ್ಲ. ವಿಳಂಬ ಧೋರಣೆಯಿಂದಾಗಿ ಯೋಜನೆಯ ನೆರವು ಫಲಾನುಭವಿಗಳನ್ನು ತಲುಪದೇ ಬಾಕಿ ಉಳಿದಿದೆ ಎಂದು ಲೆಕ್ಕಾಧಿಕಾರಿ ಸುರೇಶ್‌ ನಾಯ್ಕ್‌ ಅವರು ದೂರಿದ್ದಾರೆ.

‘ಪತ್ರವನ್ನು ನೋಡಿಯೇ ಇಲ್ಲ’

‘ಸುರೇಶ್‌ ನಾಯ್ಕ್‌ ಅವರು ಮೂರು ತಿಂಗಳ ಅವಧಿಗೆ ತಾಂಡಾ ಅಭಿವೃದ್ಧಿ ನಿಗಮದಲ್ಲಿ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದರು. ಅವರು ನನ್ನ ವಿರುದ್ಧ ಆರೋಪ ಮಾಡಿರುವ ದೂರಿನ ಪತ್ರವನ್ನು ನಾನು ನೋಡಿಯೇ ಇಲ್ಲ’ ಎಂದು ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ನಾಯ್ಕ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ತಪ್ಪು ಗ್ರಹಿಕೆಯಿಂದ ನನ್ನ ವಿರುದ್ಧ ಆರೋಪ ಮಾಡಿರುವಂತಿದೆ. ನಿಗಮದಲ್ಲಿ ನಾನು ಯಾವುದೇ ಅವ್ಯವಹಾರ ನಡೆಸಿಲ್ಲ. ಅಂತಹ ಅನುಮಾನಗಳಿದ್ದರೆ ಯಾವುದೇ ರೀತಿಯ ತನಿಖೆ ಎದುರಿಸುವುದಕ್ಕೂ ಸಿದ್ಧ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT