ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಚಿಂತನೆ: ಸಂವಾದ ನಾಳೆ

Published 29 ಆಗಸ್ಟ್ 2023, 15:52 IST
Last Updated 29 ಆಗಸ್ಟ್ 2023, 15:52 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯಾವಂತರೂ ಗ್ರಹಣಕ್ಕೆ ಹೆದರೋದನ್ನು ನಾನು ನೋಡಿದ್ದು ಭಾರತದಲ್ಲಿ ಮಾತ್ರ’ ಎಂದೆನ್ನುವ ಖಭೌತಶಾಸ್ತ್ರಜ್ಞೆ ಪ್ರೊ. ಪ್ರಜ್ವಲ್‌ ಶಾಸ್ತ್ರಿ ಅವರು, ‘ವೈಜ್ಞಾನಿಕ ಚಿಂತನೆ ಎಲ್ಲರಿಗಲ್ಲವೇ?’ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಆ. 31ರಂದು ಸಂಜೆ 6.30 ವಿಶಿಷ್ಟ ಸಂವಾದ ಕಾರ್ಯಕ್ರಮವೊಂದನ್ನು ನಡೆಸಿಕೊಡಲಿದ್ದಾರೆ. ನಗರದ ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಈ ಸಂವಾದ ನಡೆಯಲಿದೆ.

ವಿಜ್ಞಾನಾಸಕ್ತರಿಗೆ ಸೀಮಿತವಲ್ಲದ, ಎಲ್ಲರೂ ತೊಡಗಬಹುದಾದ ಆಪ್ತ ಸಂವಾದ ಇದಾಗಿದೆ.

ನಮ್ಮ ಆಧುನಿಕ ಜೀವನ, ವಿಜ್ಞಾನ ಮತ್ತು ತಂತ್ರಜ್ಞಾನದ ಫಲಗಳನ್ನು ಮಹತ್ತರ ರೀತಿಯಲ್ಲಿ ಅವಲಂಬಿಸಿರುವುದು ನಿಸ್ಸಂದೇಹ. ಪ್ರಪಂಚದ ಎಲ್ಲೆಡೆ ಹೀಗಿದ್ದರೂ ಭಾರತದ ವೈಶಿಷ್ಟ್ಯವೇ ಬೇರೆ. ಒಂದೆಡೆ, ಮೊಬೈಲ್ ಫೋನ್‌ಗಳನ್ನು ಬಳಸುತ್ತಾ, ಅಲ್ಟ್ರಾಸೌಂಡ್‌ನಂತಹ ವೈದ್ಯಕೀಯ ತಪಾಸಣೆಗಳ ಪ್ರಯೋಜನವನ್ನೂ ಅನುಭವಿಸುತ್ತಾ ಎಲ್ಲ ವಿಧದ ತಂತ್ರಜ್ಞಾನದ ಲಾಭ ಪಡೆಯುವ ಉತ್ಸಾಹ. ಇನ್ನೊಂದೆಡೆ, ಈ ತಂತ್ರಜ್ಞಾನಗಳ ಬುನಾದಿಯಾಗಿರುವ ವೈಜ್ಞಾನಿಕ ವಿಧಾನಗಳ ಕಡೆಗೆ ತಿರಸ್ಕಾರ. ಈ ವೈರುಧ್ಯಕ್ಕೆ ಕಾರಣಗಳೇನು? ವೈಜ್ಞಾನಿಕ ಚಿಂತನೆ ಎಂದರೆ ಅದು ವಿಜ್ಞಾನಕ್ಕೆ ಮಾತ್ರ ಸೀಮಿತವಾಗಿರುವುದೇ? ಇಷ್ಟಕ್ಕೂ ವೈಜ್ಞಾನಿಕ ಚಿಂತನೆ ಎಂದರೇನು? ಇಂತಹ ಪ್ರಶ್ನೆಗಳ ಸುತ್ತ ಈ ಸಂವಾದ ಬೆಳೆಯಲಿದೆ.

‘ಚಂದ್ರನ ನೆರಳನ್ನು ಒಂದು ಕಟ್ಟಡದ ನೆರಳಿನಂತೆಯೇ ಭಾವಿಸಿ. ಗ್ರಹಣ ವೀಕ್ಷಣೆಯಿಂದ ಏನೂ ತೊಂದರೆ ಇಲ್ಲ’ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಜ್ವಲ್‌ ಶಾಸ್ತ್ರಿ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನಲ್ಲಿ ಖಭೌತಶಾಸ್ತ್ರಜ್ಞೆಯಾಗಿ ಕೆಲಸ ಮಾಡಿದವರು. ಕಪ್ಪು ಕುಳಿಗಳು ಮತ್ತು ಗೆಲ್ಯಾಕ್ಸಿಗಳ ಕುರಿತು ವಿಶೇಷವಾಗಿ ಅಧ್ಯಯನ ಮಾಡಿದವರು. ವೈಜ್ಞಾನಿಕ ವಿಷಯಗಳ ಕುರಿತು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸುಲಭವಾಗಿ ಲೇಖನ ಬರೆಯುವಲ್ಲಿ ಅವರು ಸಿದ್ಧಹಸ್ತರು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಚಾರ ನಡೆಸಿರುವ ಪ್ರಜ್ಞಾನ್‌ ರೋವರ್‌ನ ಕಾರ್ಯವೈಖರಿಯನ್ನೂ ವಿವರಿಸಬಲ್ಲವರು. ಸಂವಾದದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಬಿಐಸಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT