ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಬೇನಾಮಿ ಆಸ್ತಿ ಜಪ್ತಿ?

ಬೇನಾಮಿ ಕಾಯ್ದೆಯಡಿ ತನಿಖೆ ನಡೆಸುತ್ತಿರುವ ಐ.ಟಿ
Last Updated 7 ಜನವರಿ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೊಂದಿದ್ದಾರೆ ಎನ್ನಲಾದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಲುಆದಾಯ ತೆರಿಗೆ ಇಲಾಖೆ (ಐ.ಟಿ) ಕಾನೂನು ಪ್ರಕ್ರಿಯೆ ಆರಂಭಿಸಿದೆ.

ಬೇನಾಮಿ ಕಾಯ್ದೆಯಡಿ ಸಚಿವರು ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ತನಿಖೆ ಪ್ರಗತಿಯಲ್ಲಿದ್ದು, ಸಚಿವರ ಬೇನಾಮಿ ಆಸ್ತಿ ಕುರಿತಂತೆ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ಜ‍ಪ್ತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ಆರೋಪ ಸಂಬಂಧ ಕಳೆದ ವಾರ ಶಿವಕುಮಾರ್‌ ಅವರ ತಾಯಿ ಗೌರಮ್ಮ ಅವರನ್ನು ಐ.ಟಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಇದರಿಂದ ಸಿಟ್ಟಿಗೆದ್ದಿದ್ದ ಸಚಿವರು, 80 ವರ್ಷ ದಾಟಿದ ತಮ್ಮ ತಾಯಿಯನ್ನು ಸುಮಾರು ಆರು ಗಂಟೆ ವಿಚಾರಣೆ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಶಿವಕುಮಾರ್‌ ಎಷ್ಟು ಬೇನಾಮಿ ಆಸ್ತಿ ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಮೂಲಗಳು ನಿರಾಕರಿಸಿವೆ. ಆದರೆ, ಅವರು ಬೇನಾಮಿ ಹೆಸರಿನಲ್ಲಿ ಜಮೀನು ಹೊಂದಿರುವುದು ತನಿಖೆಯಿಂದ ದೃಢ‍ಪಟ್ಟಿದೆ ಎಂದು ಹೇಳಿವೆ.

ತೆರಿಗೆ ತಪ್ಪಿಸಿರುವ ಆರೋಪ ಸೇರಿಬೇರೆ ಪ್ರಕರಣಗಳಲ್ಲಿ ಸಚಿವರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಬೇನಾಮಿ ಆಸ್ತಿ ಹೊಂದಿದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಮೊಕದ್ದಮೆ ಹೂಡಲಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಸಚಿವ ಶಿವಕುಮಾರ್‌, ಅವರ ಆಪ್ತರ ಮನೆಗಳು, ಬಿಡದಿ ಸಮೀಪದ ಈಗಲ್‌ಟನ್‌ ರೆಸಾರ್ಟ್‌ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಆಸ್ತಿಪಾಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆ ವೇಳೆ ‘ಶಾಸಕರ ಖರೀದಿ’ ತಪ್ಪಿಸಲು ಕಾಂಗ್ರೆಸ್‌ ಶಾಸಕರನ್ನು ಅಹಮದಾಬಾದ್‌ನಿಂದ ಬೆಂಗಳೂರಿಗೆ ಕರೆತಂದು ಶಿವಕುಮಾರ್ ಆಶ್ರಯ ನೀಡಿದ್ದರು.ಅದೇ ಸಮಯದಲ್ಲಿ ಆದಾಯ ತೆರಿಗೆ ದಾಳಿ ನಡೆದಿತ್ತು.

ನಿರ್ಮಾಪಕರ ಅಘೋಷಿತ ಆಸ್ತಿ ಅಧಿಕ!

‘ಸ್ಯಾಂಡಲ್‌ವುಡ್‌’ ನಟರು ಮತ್ತು ನಿರ್ಮಾಪಕರ ಮನೆಗಳ ಮೇಲೆ ಈಚೆಗೆ ನಡೆದ ಐ.ಟಿ. ದಾಳಿ ವೇಳೆ ಪತ್ತೆಯಾಗಿರುವ ₹ 109 ಕೋಟಿ ಮೌಲ್ಯದ ಅಘೋಷಿತ ಆಸ್ತಿಯಲ್ಲಿ ದೊಡ್ಡ ಪಾಲು ನಿರ್ಮಾಪಕರದ್ದು’ ಎಂದು ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ಮಹಾ ನಿರ್ದೇಶಕ ಬಿ.ಆರ್‌. ಬಾಲಕೃಷ್ಣನ್‌, ಪ್ರಧಾನ ನಿರ್ದೇಶಕ ಆರ್‌. ರವಿಚಂದ್ರನ್‌ ಹೇಳಿದರು.

₹ 109 ಕೋಟಿಯಲ್ಲಿ ಯಾರ ಪಾಲು ಎಷ್ಟು ಎಂಬ ಮಾಹಿತಿ ನೀಡಲು ಅವರು ನಿರಾಕರಿಸಿದರು. ಆದರೆ, ಕನ್ನಡ ಚಿತ್ರರಂಗದ ಒಟ್ಟಾರೆ ವಹಿವಾಟಿನಲ್ಲಿ ಶೇ 30ರಿಂದ 40 ರಷ್ಟು ನಗದು ರೂಪದಲ್ಲಿ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು. ಸ್ಟಾರ್‌ ನಟರು ತಮ್ಮ ಭಾಗಶಃ ಸಂಭಾವನೆಯನ್ನು ನಗದು ರೂಪದಲ್ಲಿ ಪಡೆದಿದ್ದಾರೆ. ಉಳಿದಿದ್ದನ್ನು ಚೆಕ್‌ನಲ್ಲಿ ತೆಗೆದುಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಕೊಟ್ಟಿರುವ ಮಾಹಿತಿಗೂ ಅವರ ಆದಾಯಕ್ಕೂ ವ್ಯತ್ಯಾಸ ಕಂಡುಬಂದಿದೆ. ನಿರ್ಮಾಪಕರು ಹಾಗೂ ಚಿತ್ರಮಂದಿರಗಳ ಮಾಲೀಕರೂ ಇದನ್ನೇ ಮಾಡಿದ್ದಾರೆ ಎಂದರು.

ಇತ್ತೀಚಿಗೆ ಕೆಲವು ಭಾರಿ ಬಜೆಟ್‌ ಸಿನಿಮಾ ಮಾಡಲಾಗಿದೆ ಎಂದು ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಕಡಿಮೆ ಖರ್ಚು ಮಾಡಲಾಗಿದೆ. ಅದೇ ರೀತಿ ಸಿನಿಮಾ‍ಪ್ರದರ್ಶನದಿಂದ ಭಾರಿ ಹಣ ಸಂಗ್ರಹವಾಗಿದೆ ಎಂದೂ ಪ್ರತಿಪಾದಿಸಲಾಗಿದೆ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT