ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಉಪ ಚುನಾವಣೆ: ಕಾಂಗ್ರೆಸ್‌ನಿಂದ ಶೆಟ್ಟರ್‌, ಬೋಸರಾಜು, ತಿಪ್ಪಣ್ಣಪ್ಪ ಕಣಕ್ಕೆ

Published 19 ಜೂನ್ 2023, 12:00 IST
Last Updated 19 ಜೂನ್ 2023, 12:00 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಜಗದೀಶ ಶೆಟ್ಟರ್‌, ತಿಪ್ಪಣ್ಣಪ್ಪ ಕಮಕನೂರ್‌ ಹಾಗೂ ಎನ್‌.ಎಸ್‌.ಬೋಸರಾಜು ಕಣಕ್ಕೆ ಇಳಿಯಲಿದ್ದಾರೆ. 

ಲಕ್ಷ್ಮಣ ಸವದಿ, ಬಾಬುರಾವ್‌ ಚಿಂಚನಸೂರ ಹಾಗೂ ಆರ್‌.ಶಂಕರ್‌ ರಾಜೀನಾಮೆಯಿಂದ ತೆರವಾಗಿರುವ ಮೂರು ಸ್ಥಾನಗಳಿಗೆ ಉಪಚುನಾವಣೆ ಇದೇ 30ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನ. ಈ ಚುನಾವಣೆಯಲ್ಲಿ ವಿಧಾನಸಭೆಯ ಸದಸ್ಯರು ಮತ ಚಲಾಯಿಸಲಿದ್ದಾರೆ. ಮೂರು ಸ್ಥಾನಗಳ ಚುನಾವಣೆಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ, ವಿಧಾನಸಭೆಯಲ್ಲಿ 135 ಸದಸ್ಯ ಬಲವನ್ನು ಹೊಂದಿರುವ ಕಾಂಗ್ರೆಸ್‌ ಮೂರು ಸ್ಥಾನಗಳಲ್ಲಿ ನಿರಾಯಾಸವಾಗಿ ಗೆಲ್ಲಲಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವ ಜೆಡಿಎಸ್‌ ನಿರ್ಧರಿಸಿದೆ. ಬಿಜೆಪಿ ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಅನುಮಾನ.  

ಬಿಜೆಪಿ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ವಿಧಾನಸಭಾ ಚುನಾವಣೆಗೆ ಮುನ್ನ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಸೇರಿದ್ದರು. ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದಲ್ಲಿ ಸ್ಪರ್ಧಿಸಿ ಅವರು ಸೋತಿದ್ದರು. ಪರಿಷತ್‌ನಲ್ಲಿ ಶೆಟ್ಟರ್ ಅವರು 2028ರ ಜೂನ್‌ 14ರ ವರೆಗೆ ಸದಸ್ಯರಾಗಿರಲಿದ್ದಾರೆ. 

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರಾಗಿರುವ ಕೋಲಿ ಸಮುದಾಯದ ಮುಖಂಡ ತಿಪ್ಪಣ್ಣಪ್ಪ ಅವರು ಈ ಹಿಂದೆ ಒಂದು ವರ್ಷದ ಅವಧಿಗೆ (2019) ಪರಿಷತ್‌ ಸದಸ್ಯರಾಗಿದ್ದರು. ಕಲಬುರ್ಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋಲಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ಮತ ಸೆಳೆಯುವ ಉದ್ದೇಶದಿಂದ ತಿಪ್ಪಣ್ಣಪ್ಪ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಅವರ ಪರಿಷತ್ ಸದಸ್ಯ ಸ್ಥಾನದ ಅವಧಿ 2026ರ ಜೂನ್ 30ರ ವರೆಗೆ ಇರಲಿದೆ. 

ಉಭಯ ಸದನಗಳ ಸದಸ್ಯರೂ ಅಲ್ಲದ ಎನ್‌.ಎಸ್‌.ಬೋಸರಾಜು ಅವರು ಸಚಿವರಾಗಿದ್ದಾರೆ. ಆರು ತಿಂಗಳ ಒಳಗೆ ಅವರು ವಿಧಾನಸಭೆ ಅಥವಾ ಪರಿಷತ್‌ನ ಸದಸ್ಯರಾಗಬೇಕಿದೆ. ಹೀಗಾಗಿ, ಪಕ್ಷದ ಮೂರನೇ ಅಭ್ಯರ್ಥಿಯಾಗಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ಅವರು 2024ರ ಜೂನ್‌ 17ರ ವರೆಗೆ ‍ಪರಿಷತ್‌ ಸದಸ್ಯರಾಗಿ ಇರಲಿದ್ದಾರೆ. 

ವಿಧಾನ ‍ಪರಿಷತ್‌ಗೆ ನಾಮನಿರ್ದೇಶನಗೊಂಡಿರುವ ಮೋಹನ್‌ ಕುಮಾರ್ ಕೊಂಡಜ್ಜಿ, ಪಿ.ಆರ್.ರಮೇಶ್‌ ಹಾಗೂ ಸಿ.ಎಂ. ಲಿಂಗಪ್ಪ ಅವರ ಅವಧಿ ಆಗಸ್ಟ್‌ನಲ್ಲಿ ಮುಗಿಯಲಿದೆ. ಈ ಸ್ಥಾನಗಳಿಗೆ ಆಗಸ್ಟ್‌ನಲ್ಲೇ ನಾಮನಿರ್ದೇಶನ ಮಾಡಲಾಗುವುದು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT