ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ–ಶಿಪ್‌ ನಲ್ಲಿ ಹೊಸ ಹುದ್ದೆ ಸೃಷ್ಟಿಗೆ ಒತ್ತಡ

ಬಡ್ತಿ ಹೊಂದಿ ವರ್ಗಾವಣೆಯಾಗಿ ಏಳು ತಿಂಗಳು ಕಳೆದರೂ ಹುದ್ದೆ ತ್ಯಜಿಸಲು ಅಧಿಕಾರಿ ಹಿಂದೇಟು
Last Updated 27 ಡಿಸೆಂಬರ್ 2018, 16:36 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ–ಶಿಪ್) ಸೂಪರಿಂಟೆಂಡಿಂಗ್ ಎಂಜಿನಿಯರ್ ಹುದ್ದೆಯಿಂದ ಬಡ್ತಿ ಹೊಂದಿ ವರ್ಗಾವಣೆಯಾಗಿ ಏಳು ತಿಂಗಳು ಕಳೆದರೂ ಅಧಿಕಾರಿಯೊಬ್ಬರು ಹೊಸ ಹುದ್ದೆ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗಾಗಿಯೇ ಕೆ–ಶಿಪ್ ನಲ್ಲಿ ಪ್ರತ್ಯೇಕ ಮುಖ್ಯ ಎಂಜಿನಿಯರಿಂಗ್ ಹುದ್ದೆ ಸೃಷ್ಟಿಸುವ ಯತ್ನ ನಡೆದಿದೆ.

ರಾಜ್ಯದಲ್ಲಿ ಕೆ–ಶಿಪ್ ಯೋಜನೆ ಆರಂಭವಾಗಿದ್ದು 1999–2000ರಲ್ಲಿ. ಈ ಯೋಜನೆಯಡಿ ಎರಡು ಹಂತದ ಯೋಜನೆಗಳು ಪೂರ್ಣಗೊಂಡಿವೆ. ಮೂರನೇ ಹಂತದಲ್ಲಿ 420 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ₹5,200 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಯೋಜನೆಗೆ ₹2,500 ಕೋಟಿ ಸಾಲ ನೀಡಲು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ಇತ್ತೀಚೆಗೆ ಒಪ್ಪಿಗೆ ನೀಡಿದೆ. ಈ ಯೋಜನೆಯ ಮೇಲುಸ್ತುವಾರಿ ವಹಿಸಿಕೊಳ್ಳುವುದು ಸೂಪರಿಂಟೆಂಡಿಂಗ್ ಎಂಜಿನಿಯರ್‌ ಹುದ್ದೆಯಲ್ಲಿರುವವರ ಆಲೋಚನೆ. ಈ ಉದ್ದೇಶಕ್ಕಾಗಿ ಪ್ರತ್ಯೇಕ ಮುಖ್ಯ ಎಂಜಿನಿಯರ್ ಹುದ್ದೆ ಸೃಷ್ಟಿಗೆ ಹಿರಿಯ ಐಎಎಸ್ ಅಧಿಕಾರಿ ಮೂಲಕ ಅವರುಒತ್ತಡ ಹೇರುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ ಈ ಕಾಮಗಾರಿಗಳ ಹೊಣೆಯನ್ನು ಯೋಜನಾ ನಿರ್ದೇಶಕರು ನೋಡಿಕೊಳ್ಳುತ್ತಿದ್ದರು. ಈಗ ₹2,500ಕೋಟಿಯ ಕಾಮಗಾರಿಯ ಮೇಲ್ವಿಚಾರಣೆಗೆ ಮತ್ತೊಂದು ಮುಖ್ಯ ಎಂಜಿನಿಯರ್‌ಹುದ್ದೆ ಸೃಷ್ಟಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೆ–ಶಿಪ್ ನಲ್ಲಿ ಸೂಪರಿಂಟೆಂಡಿಂಗ್ ಎಂಜಿನಿಯರ್ ಆಗಿದ್ದ ಡಾ.ಮಸೂದ್ ಶರೀಫ್ ಅವರಿಗೆ ಮುಖ್ಯ ಎಂಜಿನಿಯರಿಂಗ್ ಹುದ್ದೆಗೆ (₹90,500–₹1,23,300 ವೇತನ ಶ್ರೇಣಿ) ಈ ವರ್ಷದ ಮೇ 31 ರಂದು ಬಡ್ತಿ ನೀಡಲಾಗಿತ್ತು. ಬಳಿಕ ಅವರನ್ನು ಭೀಮರಾಯನಗುಡಿಯ ಕೃಷ್ಣಾ ಮೇಲ್ದಂಡೆ ಯೋಜನೆಯ ( ಕಾಡಾ) ಆಡಳಿತಾಧಿಕಾರಿ ಹಾಗೂ ಮುಖ್ಯ ಎಂಜಿನಿಯರ್ ಹುದ್ದೆಗೆ ಜೂನ್ 8 ರಂದು ವರ್ಗ ಮಾಡಲಾಗಿತ್ತು. ಅವರು ಆ ಹೊಣೆ ವಹಿಸಿಕೊಂಡಿರಲಿಲ್ಲ. ಬಳಿಕ ಬೆಂಗಳೂರು ಮೆಟ್ರೊ ರೈಲು ಯೋಜನೆಯ ಮುಖ್ಯ ಎಂಜಿನಿಯರ್ ಹುದ್ದೆಗೆ ಅಕ್ಟೋಬರ್ 29 ರಂದು ವರ್ಗಾವಣೆ ಮಾಡಲಾಗಿತ್ತು. ಕೆ–ಶಿಪ್ ಕಚೇರಿಯಿಂದ ನಾಲ್ಕೈದು ಕಿ.ಮೀ. ದೂರದ ಕಚೇರಿಗೆ ಹೋಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗೆ ದೂರು: ಮೂರನೇ ಹಂತದಲ್ಲಿ ₹2,068 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಹಣಕಾಸು ಇಲಾಖೆಗೆ ಅನುಮೋದನೆಗೆ‌ ಹೋಗುವಾಗ ಯೋಜನಾ ವೆಚ್ಚ ₹2,500 ಕೋಟಿಗೆ ಏರಿತ್ತು. ಈಗ ಪ್ರತಿ ಕಿ.ಮೀ. ಕಾಮಗಾರಿಗೆ ₹6 ಕೋಟಿ ವೆಚ್ಚ ಮಾಡಲಾಗುತ್ತಿದೆ. ಯೋಜನಾ ಮೊತ್ತ ಹೆಚ್ಚಳದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ವಕೀಲರೊಬ್ಬರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದರು.

ಕೆ–ಶಿಪ್ ಮುಖ್ಯ ಯೋಜನಾಧಿಕಾರಿ ಆಗಿದ್ದ ಐಎಎಸ್ ಅಧಿಕಾರಿ ಮಣಿವಣ್ಣನ್ ಹಾಗೂ ಸೂಪರಿಂಟೆಂಡಿಂಗ್ ಎಂಜಿನಿಯರ್ ಶಿವಕುಮಾರ್ ಭಾಗಿಯಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸುವಂತೆ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು. ಈ ನಡುವೆ, ಮಣಿವಣ್ಣನ್ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಿದ್ದರು. ಶಿವಕುಮಾರ್ ಅವರನ್ನು ವರ್ಗ ಮಾಡಲಾಗಿತ್ತು. ಈ ಜವಾಬ್ದಾರಿಯನ್ನು ಮಸೂದ್ ಅವರಿಗೆ‌ ನೀಡಲಾಗಿತ್ತು. ಅಧಿಕಾರಿಗಳನ್ನು ವಿಚಾರಣೆ ನಡೆಸದೆಯೇ ಸಮಿತಿ ನವೆಂಬರ್ 9 ರಂದು‌ ಕ್ಲೀನ್ ಚಿಟ್ ನೀಡಿತ್ತು. ಈ ಹುದ್ದೆಯಲ್ಲೇ ಉಳಿದಿರುವ ಮಸೂದ್ ಅವರು ಹೊಸ ಹುದ್ದೆ ಸೃಜಿಸಲು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT