ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಮುದುಕರ ಭಾಷೆಯಾಗುವ ಅಪಾಯ: ಓ.ಎಲ್‌.ನಾಗಭೂಷಣಸ್ವಾಮಿ ಕಳವಳ

ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ: ದ್ರಾವಿಡ ಭಾಷೆಗಳಿಗಿರುವ ಸವಾಲುಗಳ ಅನಾವರಣ
Published : 10 ಆಗಸ್ಟ್ 2024, 15:39 IST
Last Updated : 10 ಆಗಸ್ಟ್ 2024, 15:39 IST
ಫಾಲೋ ಮಾಡಿ
Comments

ಬೆಂಗಳೂರು: ‘ಕನ್ನಡ ಮಾತನಾಡುವವರು ಯಾವಾಗಲೂ ಇರುತ್ತಾರೆ. ಅದನ್ನು ಕೇಳಿಸಿಕೊಳ್ಳುವವರು ಇರುವುದಿಲ್ಲ. ಮುದುಕರ ಭಾಷೆಯಾಗಷ್ಟೇ ಉಳಿಯುವ ಅಪಾಯವಿದೆ’ ಎಂದು ವಿಮರ್ಶಕ ಓ.ಎಲ್‌.ನಾಗಭೂಷಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದ ‘ದಕ್ಷಿಣ ಭಾರತದ ಭಾಷೆಗಳ ಉಳಿವಿನ ಪ್ರಶ್ನೆ’ ಗೋಷ್ಠಿಯಲ್ಲಿ ಕವಯತ್ರಿ ಪ್ರತಿಭಾ ನಂದಕುಮಾರ್, ‘ಡಿಜಿಟಲ್‌ ಜಗತ್ತಿಗೆ ಪ್ರವೇಶ ಪಡೆದ ಯಾವ ಭಾಷೆಗೂ ಅಳಿವಿನ ಭಯವಿಲ್ಲ. ಕನ್ನಡಕ್ಕೂ ಇಲ್ಲ’ ಎಂದಾಗ ನಾಗಭೂಷಣಸ್ವಾಮಿ ಅವರು ಪ್ರತಿಕ್ರಿಯಿಸಿದ ಬಗೆ ಇದು.

ಇದನ್ನು ನಿರಾಕರಿಸುತ್ತಲೇ ನಾಗಭೂಷಣಸ್ವಾಮಿ, ಕನ್ನಡ ಎದುರಿಸುತ್ತಿರುವ ಅಪಾಯವನ್ನು ತೆರೆದಿಟ್ಟರು. ‘ಮೇಲು ವರ್ಗಗಳು, ಪ್ರಬಲಜಾತಿಗಳು ಮತ್ತು ಮಧ್ಯಮ ವರ್ಗವು ಇಂಗ್ಲಿಷ್‌ ಅನ್ನು ಅಧಿಕಾರದ ಭಾಷೆ ಎಂದು ಬಿಂಬಿಸಿವೆ. ಕನ್ನಡ ಮಾತನಾಡಿದರೆ ದಂಡ ಹಾಕುವ ಶಾಲೆಗಳಿವೆ. ನನ್ನ ಮೊಮ್ಮಗನಿಗೆ ಗುರುವಾರ ಮತ್ತು ಹದಿನೇಳು ಎಂದರೆ ಅರ್ಥವಾಗುವುದಿಲ್ಲ. ಅವನಿಗೆ ಥರ್ಸ್‌ಡೇ ಮತ್ತು ಸವೆಂಟೀನ್‌ ಎಂದೇ ಹೇಳಬೇಕು. ಹೀಗೆ ಹೊಸ ತಲೆಮಾರನ್ನು ಕನ್ನಡದಿಂದ ದೂರ ಮಾಡುತ್ತಿದ್ದೇವೆ. ನಮ್ಮೆದುರು ಇರುವ ಅಪಾಯವಿದು’ ಎಂದು ಎಚ್ಚರಿಸಿದರು.

ತಮಿಳು ಕತೆಗಾರ ಪೆರುಮಾಳ್‌ ಮುರುಗನ್‌, ‘ನಾನು ಎಸ್‌ಬಿಐ ಗ್ರಾಹಕ. ಬ್ಯಾಂಕ್‌ ಸಂದೇಶಗಳೆಲ್ಲವೂ ಹಿಂದಿಯಲ್ಲಿ ಬರುತ್ತವೆ. ನಮ್ಮ ಬ್ಯಾಂಕ್‌ಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಹಿಂದಿ ಮಂದಿ ಬಂದು ಕೂತಿದ್ದಾರೆ. ಹಿಂದಿಯನ್ನು ಹೇರುವ ಕೆಲಸ ವ್ಯವಸ್ಥಿತವಾಗಿ ಆಗುತ್ತಿದೆ’ ಎಂದರು.

‘ಮಲಯಾಳಿಗಳ ಮೇಲೆ ಹಿಂದೆ ಹೇರಿಕೆ ಸಾಧ್ಯವೇ ಇಲ್ಲ. ರಾಜಕೀಯ, ಧರ್ಮ ಮತ್ತು ಮಾಧ್ಯಮದ ಭಾಷೆಯಾಗಿದ್ದರಷ್ಟೇ ಒಂದು ಭಾಷೆ ಪ್ರಬಲವಾಗುತ್ತದೆ. ಮಲಯಾಳಿಗಳಿಗೆ ಇವೆಲ್ಲವೂ ಮಲಯಾಳದಲ್ಲೇ ಇರಬೇಕು. ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಇವನ್ನು ಮಾರಾಟ ಮಾಡಿದರೆ ಅದು ನಡೆಯುವುದಿಲ್ಲ. ದ್ರಾವಿಡ ಭಾಷೆಗಳೂ ಇದೇ ಹಾದಿಯಲ್ಲಿ ಸಾಗಿದರೆ ಅವುಗಳ ಉಳಿವಿದೆ’ ಎಂದು ಮಲಯಾಳ ಕತೆಗಾರ ಪಾಲ್‌ ಸಕಾರಿಯಾ ಹೇಳಿದರು.

‘ತೆಲುಗು ಎಲ್ಲವನ್ನೂ ಒಳಗೊಳ್ಳುತ್ತದೆ. ಅದು ದ್ರಾವಿಡ ಭಾಷೆಗಳಿರಲಿ, ಹಿಂದಿಯಿರಲಿ, ಇಂಗ್ಲಿಷ್‌ ಇರಲಿ. ತೆಲುಗು ಮಂದಿ ಅವೆಲ್ಲವನ್ನೂ ತಮ್ಮದಾಗಿಸಿಕೊಂಡುಬಿಡುತ್ತಾರೆ. ಹೀಗೆ ಭಾಷೆ ಬೆಳೆಯುತ್ತಾ ಹೋಗುವುದರಿಂದ ಅದಕ್ಕೆ ಅಳಿವಿನ ಭಯವಿಲ್ಲ. ನಾವಿಲ್ಲಿ ದ್ರಾವಿಡ ಸಾಹಿತ್ಯವನ್ನಷ್ಟೇ ಚರ್ಚಿಸುತ್ತಿದ್ದೇವೆ. ನಿಜಕ್ಕೂ ಆಗಬೇಕಿರುವ ಕೆಲಸ, ದ್ರಾವಿಡ ಭಾಷೆಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯನ್ನಾಗಿಸುವುದು’ ಎಂಬುದು ತೆಲುಗು ಕವಿ ವಡ್ರೇವು ಚಿನ್ನಭದ್ರುಡು ಪ್ರತಿಪಾದನೆ.

ಹೀಗೆ ದ್ರಾವಿಡ ಭಾಷೆಗಳನ್ನು ದುಡಿಯುವ ಭಾಷೆಯನ್ನಾಗಿಸುವಿದರಲ್ಲಿ ಅವುಗಳ ಉಳಿವಿದೆ ಎಂಬಲ್ಲಿಗೆ ಗೋಷ್ಠಿಗೆ ತೆರೆಬಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT