ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲೂ ಬೆಂಗಳೂರು ಮಾದರಿ ಹೋರಾಟ: ಕರ್ನಾಟಕ ರಕ್ಷಣಾ ವೇದಿಕೆ

Published 23 ಫೆಬ್ರುವರಿ 2024, 13:11 IST
Last Updated 23 ಫೆಬ್ರುವರಿ 2024, 13:11 IST
ಅಕ್ಷರ ಗಾತ್ರ

ಬೆಳಗಾವಿ: ‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿದೆ. ಆದರೆ, ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಕನ್ನಡ ಕಡ್ಡಾಯ ಕುರಿತು ಬೆಂಗಳೂರಿನಲ್ಲಿ ಮಾದರಿಯ ಹೋರಾಟವನ್ನು ಬೆಳಗಾವಿಯಲ್ಲೂ ಮಾಡುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ಮಾಡಿದ್ದಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರೋಧಿಸುತ್ತಿದೆ. ಎಂಇಎಸ್‌ನವರು ನಾಡದ್ರೋಹಿಗಳು. ಕನ್ನಡ ಕಡ್ಡಾಯ ಮಾಡಿದ್ದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಎಂಇಎಸ್‌ ಮುಖಂಡರು ಹೇಳುತ್ತಿದ್ದಾರೆ. ಒಂದು ವೇಳೆ ಅಂಥ ಹೆಜ್ಜೆ ಇಟ್ಟರೆ ಬೆಂಗಳೂರಿನಲ್ಲಿ ಕನ್ನಡ ವಿರೋಧಿಗಳಿಗೆ ಮಾಡಿದ ಶಾಸ್ತಿಯನ್ನೇ ಇವರಿಗೂ ಮಾಡುತ್ತೇವೆ’ ಎಂದರು.

‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾರಾದರೂ ಕನ್ನಡ ವಿರೋಧಿಸುವ ಯತ್ನ ಮಾಡಿದರೆ ನೋಡಿಕೊಂಡು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಎಂಇಎಸ್‌ ಆಗಲೀ, ಶಿವಸೇನೆ ಆಗಲಿ; ಯಾರು ಬಂದರೂ ನಾವು ಹೋರಾಟಕ್ಕೆ ಸಿದ್ಧ’ ಎಂದರು.

‘ಬೆಂಗಳೂರು ಉದ್ಯಮಿಗಳ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮನ್ನು 14 ದಿನ ಜೈಲಿಗೆ ಕಳಿಸಿದರು. ನಾನು 6ನೇ ಬಾರಿ ಜೈಲಿಗೆ ಹೋಗಿದ್ದೇನೆ. ನನ್ನ ಮೇಲೆ ಇಲ್ಲಸಲ್ಲದ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಮ್ಮ ಹೋರಾಟದಿಂದ ಸರ್ಕಾರ ಖುಷಿ ಪಡಬೇಕಿತ್ತು. ಬದಲಾಗಿ, ಕಟುವಾಗಿ ನಡೆದುಕೊಂಡಿದೆ’ ಎಂದು ನಾರಾಯಣ ಗೌಡ ಟೀಕಿಸಿದರು.

‘ನನ್ನ ಇಬ್ಬರು ಮಕ್ಕಳು ಹುಟ್ಟುವಾಗಲೂ ನಾನು ಜೈಲಿನಲ್ಲೇ ಇದ್ದೆ. ಜೈಲು, ಕೋರ್ಟ್‌ ನನಗೇನೂ ಹೊಸದಲ್ಲ. ಕನ್ನಡಕ್ಕಾಗಿ ಇನ್ನೂ ಎಷ್ಟು ಬಾರಿ ಜೈಲು ಸೇರಬೇಕಾಗುತ್ತದೆ ಎಂಬುದೂ ಗೊತ್ತಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಇಲ್ಲ’ ಎಂದೂ ಕಿಡಿ ಕಾರಿದರು.

‘ಫೆ.28ರ ಬಳಿಕ ಎಲ್ಲ 31 ಜಿಲ್ಲೆಗಳಲ್ಲೂ ಹೋರಾಟ ನಡೆಯಲಿದೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ ಎಲ್ಲ ಕನ್ನಡಿಗರೂ ಬೆಂಬಲಿಸಿದ್ದಾರೆ. ಬೆಂಗಳೂರು ಮಾತ್ರವಲ್ಲ; ಇಡೀ ರಾಜ್ಯ ಕನ್ನಡಮಯ ಆಗಬೇಕು. ಅದಕ್ಕಾಗಿ ಫೆ.28ರವರೆಗೆ ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ. ಮಾತಿನಂತೆ ನಡೆದುಕೊಳ್ಳದಿದ್ದರೆ ಮತ್ತೆ ಉಗ್ರ ಹೋರಾಟ ಅನಿವಾರ್ಯ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT