ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರು ವಿಶ್ವ ಮಾನವರಾಗಬೇಕು: ಸುಧಾಕರ್‌

67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್‌
Last Updated 2 ನವೆಂಬರ್ 2022, 6:13 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕನ್ನಡಾಭಿಮಾನ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಬಾರದು‌‌. ಕರ್ನಾಟಕದಲ್ಲಿ ನಾವು ಇರುವುದಲ್ಲ, ನಮ್ಮೊಳಗೆ ಕರ್ನಾಟಕ ಇರಬೇಕು. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕನ್ನಡಿಗರು ವಿಶ್ವ ಮಾನವರಾಗಬೇಕು’ ಎಂದುಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ದೇವನಹಳ್ಳಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ತೆಲುಗು, ತಮಿಳು, ಮರಾಠಿ ಹೀಗೆ ಹಲವು ಭಾಷಿಕರ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರೆಲ್ಲ ಏಕೀಕೃತ ಕನ್ನಡ ನಾಡಿನಲ್ಲಿ ಒಂದಾಗಿರುವುದರ ಹಿಂದೆ ದೊಡ್ಡ ಇತಿಹಾಸವಿದೆ. ಡೆಪ್ಯುಟಿ ಚೆನ್ನಬಸಪ್ಪ ಸೇರಿದಂತೆ ಅನೇಕ ಮಹನೀಯರು ಕನ್ನಡ ನಾಡಿನ ಏಕೀಕರಣಕ್ಕೆ ಹೋರಾಡಿದ್ದಾರೆ ಎಂದರು.

ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಸಮೃದ್ಧಿ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇದೇ 11ರಂದು ಅನಾವರಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ಕೈಗಾರಿಕೆ, ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ, ಮೀಸಲಾತಿ ಸಿಗಬೇಕು. ಸರ್ಕಾರ ಕನ್ನಡಿಗರ ಹಿತ ಕಾಯಬೇಕು’ ಎಂದು ಮನವಿ ಮಾಡಿದರು.

ಆಕರ್ಷಕ ಪಥ ಸಂಚಲನ:ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪೊಲೀಸ್, ಮಹಿಳಾ ಪೊಲೀಸ್, ವಿವಿಧಶಾಲೆ-ಕಾಲೇಜುಗಳ ತಂಡಗಳು ಸೇರಿ ವಿವಿಧ 18 ತಂಡಗಳಿಂದ ಶಿಸ್ತುಬದ್ಧ ಹಾಗೂ ಆಕರ್ಷಕ ಪಥಸಂಚಲನ ಜರುಗಿತು.

ಎಸ್.ಎಸ್.ಎಲ್.ಸಿ. ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್‌ಟಾಪ್ ಹಾಗೂ ಬ್ರೈಲ್‌ ಕಿಟ್‌ ವಿತರಿಸಲಾಯಿತು.

ಜಿಲ್ಲಾಧಿಕಾರಿ ಆರ್. ಲತಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ ಕೆ., ಎಸ್‌.ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ, ದೇವನಹಳ್ಳಿ ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ವೇದಿಕೆಯಲ್ಲಿದ್ದರು.

ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ

ವಿವಿಧ ರಂಗಗಳಲ್ಲಿ ಸಾಧನೆಗೈದ ಜಿಲ್ಲೆಯ ಸಾಧಕರಿಗೆರಾಜ್ಯೋತ್ಸವದ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದೇವನಹಳ್ಳಿ ಬಿ.ಕೆ.ಗೋಪಾಲ (ಸಂಗೀತ), ಕಂಟನಕುಂಟೆಯ ಕೆ.ಎಂ.ಕೃಷ್ಣಮೂರ್ತಿ(ಪೌರಾಣಿಕ ನಾಟಕ), ಶ್ಯಾಕಲದೇವನಪುರದ ವಿ. ರಾಮಚಂದ್ರ(ಜನಪದ), ದೇವನಹಳ್ಳಿ‌ ವಿ.ಎಂ. ವೇಣುಗೋಪಾಲ(ಕ್ರೀಡೆ), ಯಲಿಯೂರು ದೇವರಾಜ ವೈ.ಎ.(ಕೃಷಿ), ದೇವನಹಳ್ಳಿಯ ಸುರೇಶಬಾಬು (ಸಾಹಿತ್ಯ), ಹೊಸಕೋಟೆಯ ಬೆಟ್ಟಹಳ್ಳಿ ಗೋಪಿನಾಥ (ಸಮಾಜಸೇವೆ), ದೊಡ್ಡಬಳ್ಳಾಪುರದ ಯುಕ್ತಿ ರಾಜೇಂದ್ರ (ಕ್ರೀಡೆ-ಏರ್ ರೈಫಲ್ ಶೂಟಿಂಗ್), ನೆಲಮಂಗಲದ ಬಿ. ರಾಮಯ್ಯ(ಸಾಮಾಜಿಕ ನಾಟಕ) ಹಾಗೂ ದೊಡ್ಡಬಳ್ಳಾಪುರದ ಬಿ.ಎಸ್. ಶ್ರೀಕಂಠಮೂರ್ತಿ (ಕ್ರೀಡೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT